ಕ್ರಿಯಾಯೋಜನೆ ಮಂಜೂರಾತಿ ಇಲ್ಲ

Updated on: 

ಕನ್ನಡಪ್ರಭ ವಾರ್ತೆ, ಗದಗ, ಜು. 24
ಜಿಲ್ಲೆಯ ಹಿರಿ, ಕಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಳಕೆಯಾದ ಅನುದಾನ ಸೇರಿದಂತೆ ಜಿಪಂ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡುವವರೆಗೂ ಯಾವುದೇ ಕ್ರಿಯಾಯೋಜನೆಗೆ ನಾವು ಮಂಜೂರಾತಿ ನೀಡುವುದಿಲ್ಲ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟಾಗಿ ತಿಳಿಸಿದ ಘಟನೆ ಗುರುವಾರ ಜಿಪಂ ಸಭಾಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ನಡೆಯಿತು.
ಸ್ಪಂದಿಸುತ್ತಿಲ್ಲ
ಸಭೆ ಪ್ರಾರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿದ ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಅಧಿಕಾರಿಗಳ ವರ್ತನೆ ಸರಿಯಾಗಿಲ್ಲ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ತಮಗೆ ಬೇಕಾದಂತೆ ಕಾಮಗಾರಿಗಳನ್ನು ರೂಪಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ, ಈ ರೀತಿಯ ಕ್ರಿಯಾಯೋಜನೆಗಳಿಗೆ ನಾವು ಒಪ್ಪಿಗೆ ನೀಡುವುದಿಲ್ಲ ಎಂದರು. ಇದಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ 2013-14ನೇ ಸಾಲಿನ ಮಾಸಿಕ ಲೆಕ್ಕಪತ್ರ ಅನುಮೋದನೆ ಹಾಗೂ 2013-14ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಅನುಮೋದನೆ ಹಾಗೂ 2014-15ನೇ ಸಾಲಿನ ಕ್ರಿಯಾ ಯೋಜನೆ ಅನುಮೋದನೆ ಸಿಗಲಿಲ್ಲ.
ಸರ್ಕಾರ ಜಿಪಂ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರ ನಡೆಸಿದ್ದು, ರಾಜ್ಯದ ಮೈಸೂರು, ಗದಗ, ಕೊಪ್ಪಳ, ಚಿಕ್ಕಬಳ್ಳಾಪುರ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 13ನೇ ಹಣಕಾಸಿನಡಿಯಲ್ಲಿ ನೀಡಿರುವ ಅನುದಾನದಲ್ಲಿ ಜಿಪಂ ರಸ್ತೆಗಳ ನಿರ್ವಹಣೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಣೆ ಮಾಡಲು ನೀಡುತ್ತಿರುವುದು ಖಂಡನಾರ್ಹ ಎಂದು ಗುರುವಾರದ ವಿಶೇಷ ಸಭೆಯಲ್ಲಿ ಠರಾವು ಪಾಸು ಮಾಡಿ ಸರ್ಕಾರಕ್ಕೆ ರವಾನಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಪಂ ಅಧ್ಯಕ್ಷ ಶಾಂತವ್ವ ದಂಡಿನ, ಉಪಾಧ್ಯಕ್ಷ ಸುನೀತಾ ಹಳ್ಳೆಪ್ಪನವರ, ಪ್ರಭಾರ ಸಿಇಒ ಷಡಕ್ಷರಪ್ಪ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.


ಆಶ್ಚರ್ಯದ ಸಂಗತಿ
ಅಧಿಕಾರಿ ಮತ್ತು ಸದಸ್ಯ ಬಸವರಡ್ಡೇರ ಮಧ್ಯೆ ವಾಗ್ವಾದ ನಡೆಯುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಪ್ರಭಾರ ಜಿಪಂ ಸಿಇಒ ಷಡಕ್ಷರಪ್ಪ, ಬಸವರಡ್ಡೇರ ಅವರೇ ದಯವಿಟ್ಟು ಕುಳಿತುಕೊಳ್ಳಿ, ನೀವು ಲ್ಯಾಪ್ಸ್ ಆದ ಅನುದಾನದ ಬಗ್ಗೆ ಚಿಂತಿಸಬೇಡಿ, ವಿವಿಧ ವಿಭಾಗದಲ್ಲಿ ಉಳಿಯುವ ಅನುದಾನದಲ್ಲಿ ನಿಮ್ಮ ಆರ್.ಓ ಪ್ಲ್ಯಾಂಟ್ ಪೂರ್ಣಗೊಳಿಸುತ್ತೇವೆ. ಅದರ ಬಗ್ಗೆ ಭಯ ಬೇಡ ಎಂದಿದ್ದು ನಿಜವಾಗಿಯೂ ಆಶ್ಚರ್ಯದ ಸಂಗತಿಯಾಗಿತ್ತು. ಅಭಿವೃದ್ಧಿಗಾಗಿ ಬಂದ ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ಮರಳಿರುವ ಬಗ್ಗೆ ಜನಪ್ರತಿನಿಧಿ ಪ್ರಶ್ನೆ ಮಾಡಿದರೆ, ಅದರ ಬಗ್ಗೆ ಚಿಂತಿಸಬೇಡಿ, ಬೇರೆ ಅನುದಾನದಲ್ಲಿ ಹೊಂದಾಣಿಕೆ ಮಾಡೋಣ ಎನ್ನುವ ನಿರ್ಲಕ್ಷ್ಯದ ಉತ್ತರ ನಿಜವಾಗಿಯೂ ಅಭಿವೃದ್ಧಿ ಪರವಾಗಿರುವವರಲ್ಲಿ ತೀವ್ರ ಬೇಸರಕ್ಕೆ ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com