ನರಗುಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಬೆಳೆಸಾಲವನ್ನು 6 ತಿಂಗಳ ಬದಲು ವರ್ಷ ಅವಧಿಗೆ ಪರಿವರ್ತಿಸಲು ಆಗ್ರಹಿಸಿ ರೈತರು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಎಸ್ಬಿಐ ಈ ವರ್ಷ ತಾಲೂಕಿನಲ್ಲಿ ರು. 21.50 ಲಕ್ಷ ರೈತರಿಗೆ ಬೆಳೆಸಾಲ ರೂಪದಲ್ಲಿ ನೀಡಿದೆ. ಇಂತಹ ಸಾಲವನ್ನು ಅಲ್ಪಾವಧಿ ಮಾಡಿದೆ. ವರ್ಷದ ಅವಧಿಗೆ ಮಾಡಿದರೆ ರೈತರಿಗೆ ಬೆಳೆ ಬಂದಾಗ ಸಾಲ ಭರಣಾ ಮಾಡಲು ಅನುಕೂಲವಾಗುವುದು. ಈ ವರ್ಷ ಗೋವಿನಜೋಳ, ಬಿ.ಟಿ. ಹತ್ತಿ, ಹೆಸರು, ಸೂರ್ಯಕಾಂತಿ, ಶೇಂಗಾ, ಕಬ್ಬು, ಬೆಳೆಗಳನ್ನು ರೈತ ಬಿತ್ತನೆ ಮಾಡಿದರೂ ಸೂಕ್ತ ಸಮಯಕ್ಕೆ ಮಳೆಯಾಗಿಲ್ಲ. ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿದ್ದು, ಕಾರಣ ಬ್ಯಾಂಕ್ ಅಧಿಕಾರಿಗಳು ಸಾಲಗಾರ ರೈತರ ಮರು ಪಾವತಿ ಮಾಡಲು ಮುಂದಾಗಬಾರದು.
ಬ್ಯಾಂಕ್ ಸಿಬ್ಬಂದಿ ಬೆಳೆವಿಮೆ ಪರಿಹಾರದ ಬಗ್ಗೆ ಸರಿಯಾದ ಮಾಹಿತಿಯನ್ನು ರೈತರಿಗೆ ನೀಡುವುದಿಲ್ಲ. ಅದಕ್ಕೆ ಈ ವರ್ಷದಿಂದ ಬೆಳೆ ವಿಮೆ ಬಂದ ತಕ್ಷಣ ನೋಟಿಸ್ ಬೋರ್ಡ್ನಲ್ಲಿ ಮಾಹಿತಿ ತಿಳಿಸಬೇಕೆಂದು ಮನವಿ ಮಾಡಿದರು.
ಬ್ಯಾಂಕ್ ಅಧಿಕಾರಿ ವಿ.ಎಚ್. ಕಲ್ಲೂರ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು. ತಾಲೂಕು ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳೆ, ವಿ.ಎಫ್. ಮೇಟಿ, ಎಸ್.ಎಸ್. ಪಾಟೀಲ, ಎಸ್.ಎಲ್.ಅಸೂಟಿ, ಎಸ್.ಎಚ್. ಪಾಟೀಲ, ಸಿ.ಜಿ. ನಂದಿ, ಎಸ್.ಎಂ. ಪಾಟೀಲ, ಎ.ವಿ. ನಾಗನೂರ, ವಿ.ಡಿ. ಹಳಕಟ್ಟಿ, ಎಸ್.ವಿ. ಕಲ್ಲೂರ, ಶಂಕರಗೌಡ ಅಸೂಟಿ, ಹನುಮಂತ ಮುಂದಿನಮನಿ, ಯಲ್ಲಪ್ಪ ನಿಡಗುಂದಿ ಉಪಸ್ಥಿತರಿದ್ದರು.