ಗದಗ: 5 ವರ್ಷದೊಳಗಿನ ಮಕ್ಕಳ ಮರಣದಲ್ಲಿ ಅತಿಸಾರ ಭೇದಿ ಪ್ರಮುಖ ಕಾರಣವಾಗಿದೆ. ಇದರ ತೀವ್ರ ತರಹದ ನಿಯಂತ್ರಣ ಕೈಕೊಳ್ಳಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ದೇಶದಲ್ಲೆಡೆ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಗದಗ ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ ಹೇಳಿದರು.
ಸೋಮವಾರ ಗದಗನ ಮಹಾತ್ಮಾ ಗಾಂಧಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾಸ್ಪತ್ರೆ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಕಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಅತಿಸಾರ ಭೇದಿ ತೀವ್ರತರಹ ನಿಯಂತ್ರಣದ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಮತ್ತು ಮಳೆಗಾಲದಲ್ಲಿ ಅತಿಸಾರ ಭೇದಿ ರೋಗಗಳು ಹೆಚ್ಚಾಗಿ ಕಂಡು ಬರುತ್ತವೆ. ಕಾರಣ ಓಆರ್ಎಸ್ ಹಾಗೂ ಜಿಂಕ್ ದ್ರಾವಣಗಳನ್ನು ಸೂಕ್ತ ಸಮಯದಲ್ಲಿ ಮಕ್ಕಳಿಗೆ ಕುಡಿಸುವುದರಿಂದ ಸಾವು-ನೋವುಗಳನ್ನು ಮತ್ತು ಅಪೌಷ್ಟಿಕತೆ ತಡೆಗಟ್ಟಬಹುದು. ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಜು. 28ರಿಂದ ಅಗಸ್ಟ್ 8ರ ವರೆಗೆ ಹಮ್ಮಿಕೊಂಡಿರುವ ಅತಿಸಾರ ಭೇದಿ ತೀವ್ರತರಹ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಓಆರ್ಎಸ್ ಹಾಗೂ ಜಿಂಕ್ ದ್ರಾವಣಗಳ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಸಕಾಲದಲ್ಲಿ ಮಕ್ಕಳಿಗೆ ಕುಡಿಸಿ ಸಾವು-ನೋವು ತಪ್ಪಿಸಬೇಕು ಎಂದರು.
ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಪಿ.ಎಚ್. ಕಬಾಡಿ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪನವರ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಡಾ. ಪ್ರಕಾಶ ಸಂಕನೂರ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಾಬಣ್ಣ ಒಂಟಕುದರಿ ಇತರರಿದ್ದರು.
ವಿಜಯಲಕ್ಷ್ಮೀ ಬೆಟಗೇರಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ನಿರೂಪಿಸಿದರು. ಜಿಲ್ಲಾ ನರ್ಸಿಂಗ್ ಅಧಿಕಾರಿ ಪದ್ಮಾವತಿ ಚಿಲ್ಲಾಳ ವಂದಿಸಿದರು.