ಗದಗ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಮೊರಾರ್ಜಿ ದೇಸಾಯಿ ವಸತಿ ನಿಲಯಗಳನ್ನು ಬಾಡಿಗೆ ಕಟ್ಟಡಗಳಿಂದ ಮುಕ್ತವಾಗಿಸಲು ಜಿಲ್ಲಾ ದಲಿತ ವಿದ್ಯಾರ್ಥಿ ಮುಖಂಡರು ಈಚೆಗೆ ಬೆಂಗಳೂರಿಗೆ ನಿಯೋಗ ತೆರಳಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ 15ಕ್ಕಿಂತಲೂ ಹೆಚ್ಚು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದು, ಲಕ್ಷಾಂತರ ರು. ಬಾಡಿಗೆ ಆಗುತ್ತದೆ. ನೀಡುತ್ತಿದ್ದು, ಇವುಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಕಾಲ ವ್ಯಾಪ್ತಿಗೆ ಸೇರಿಸಿ: ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ-ಪಂಗಡದವರಿಗೆ ಭೂ ಒಡೆತನ ಯೋಜನೆಯಡಿ ನೀಡುವ ಭೂಮಿ (ವ್ಯವಸಾಯಕ್ಕಾಗಿ) ಬಗ್ಗೆ ಜಿಲ್ಲಾ ವ್ಯವಸ್ಥಾಪಕರು ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಉನ್ನತ ಅಧಿಕಾರಿ ಮತ್ತೊಂದು ಬಾರಿ ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ನಿರ್ದೇಶಕರ ಕಚೇರಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಂಗಳೂರಿಗೆ ಕಳುಹಿಸುವುದಾಗಿ ಗದಗ ಕಚೇರಿಯಿಂದ ತಿಳಿಸುತ್ತಾರೆ. ಆದರೆ ಭೂಮಿ ನೀಡಲು ಭೂ ಮಾಲೀಕರು ಮುಂದೆ ಬಂದಾಗ ಅವರಿಗೆ ಹಣ ನೀಡಲು ಎಸ್ಸಿ/ ಎಸ್.ಟಿ. ಜನಾಂಗದವರಿಗೆ ಆಗುವುದಿಲ್ಲ. ಹಾಗಾಗಿ ಸರ್ಕಾರ ನೆರವು ನೀಡುತ್ತದೆ.
ಭೂ ಮಾಲೀಕರಿಗೆ ನಿಗದಿತ ವೇಳೆಗೆ ಹಣ ಬರದೆ ಹೋದರೆ, ಭೂಮಿ ಕೊಡಲು ಮುಂದೆ ಬಂದ ಮಾಲೀಕರು ಹಿಂದೆ ಸರಿಯುತ್ತಾರೆ. ಅದ್ಕಕಾಗಿ ಭೂ ಒಡೆತನ ಯೋಜನೆಯನ್ನು ಸಕಾಲ ವ್ಯಾಪ್ತಿಗೆ ಸೇರಿಸಿ ನಿಗದಿತ ವೇಳೆಗೆ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದೆ.
ಎಸ್ಸಿ- ಎಸ್ಟಿ ಬಲವರ್ಧನಾ ಸಮಿತಿ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿ ಚಂದ್ರಶೇಖರ ಹರಿಜನ, ಬಸವರಾಜ ಮುಳ್ಳಾಳ, ಮಹಾಂತೇಶ ಚಲವಾದಿ, ಬಸವರಾಜ ಬೇವಿನಮರದ, ವಾಸು ಚೌಡಣ್ಣವರ, ರಾಘವೇಂದ್ರ ದೊಡ್ಡಮನಿ, ಲಕ್ಷ್ಮಣ ಪೂಜಾರ, ಶಿವಾನಂದ ಅಳವಂಡಿ, ಹನಮಂತ ಪೂಜಾರ, ಬಂಗಾರಪ್ಪ ಇತರರಿದ್ದರು.