ಪಡಿತರ ಚೀಟಿ: ಪ್ರತಿಭಟನೆ

Updated on: 

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 31
ಪಡಿತರ ಚೀಟಿ ವಂಚಿತ ಯಳವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮದ ಸಾವಿರಾರು ಜನರು ಗುರುವಾರ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿದ್ದು, ಅಧಿಕಾರಿಗಳು ಸ್ಪಂದಿಸದೇ ಇರುವುದನ್ನು ವಿರೋಧಿಸಿ ದಿಢೀರ್‌ನೇ ರದ್ದಾದ ಪಡಿತರ ಚೀಟಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಜಿ.ಎಫ್.ಕೆ. ಗೌಡರ, ಶಿದ್ದಪ್ಪ ಬಾಗೋಡ, ದಯಾನಂದ ಮ್ಯಾಗೇರಿ ಮಾತನಾಡಿ, ಪಡಿತರ ಚೀಟಿ ವಂಚಿತರು ಜು. 30, 31ರೊಳಗಾಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಬಂದು ಪಡಿತರ ಚೀಟಿ ಪಡೆದುಕೊಂಡು ಹೋಗದಿದ್ದರೆ ಮುಂದೆ ಪಡಿತರ ಚೀಟಿ ರದ್ದು ಮಾಡಲಾಗುವುದೆಂದು ಹೇಳಿ ಡಂಗೂರ ಸಾರಿದ್ದಲ್ಲದೇ ಗ್ರಾಪಂ ಕಾರ್ಯಾಲಯದ ನೋಟಿಸ್ ಬೋರ್ಡಿಗೆ ನೋಟಿಸ್ ಲಗತ್ತಿಸಿದ್ದೇ ಗೊಂದಲಕ್ಕೆ ಕಾರಣವಾಗಿದೆ ಎಂದು ದೂರಿದರು. ಗ್ರಾಮದ ನ್ಯಾಯ ಬೆಲೆ ಅಂಗಡಿಗೆ ಹೋದರೆ ಈ ಕಾರ್ಡ್ ರದ್ದಾಗಿದೆ. ರೇಷನ್ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದು, ಹೊಸ ಪಡಿತರ ಚೀಟಿ ಇದ್ದ ಕೆಲವರಿಗೆ ರೇಷನ್ ನೀಡಿದರೆ ಹೆಚ್ಚಿಗೆ ಹಣ ಪಡೆಯುತ್ತಾರೆ. ಒಂದು ಲೀಟರ್ ಸೀಮೆ ಎಣ್ಣೆಗೆ ರು. 5 ಹೆಚ್ಚಿಗೆ ಪಡೆಯುತ್ತಾರೆ. ಅಧಿಕಾರಿಗಳ ಗಮನಕ್ಕೆ ತಂದರೆ ಯಾರೂ ಗ್ರಾಮದ ಕಡೆ ಹಾಯುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ ಯಾವುದೇ ನ್ಯಾಯ ಬೆಲೆ ಅಂಗಡಿಯಲ್ಲಿ ದರಪಟ್ಟಿ ಕಾಣುವುದಿಲ್ಲ ಎಂದು ಗ್ರಾಮಸ್ಥರು ದೂರಿದರು.
ಪಡಿತರ ಚೀಟಿಯ ಗೊಂದಲ ಈಗ ತಾಲೂಕಿನಲ್ಲಿ ಬೃಹದಾಕಾರವಾಗಿ ಬೆಳೆದಿದ್ದು, ಪಡಿತರ ವಂಚಿತರು, ಪಡಿತರ ಚೀಟಿ ಸಿಗಲಾರದವರು ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲದ ಹೇಳಿಕೆಗೆ ಬೇಸತ್ತಿದ್ದಾರಲ್ಲದೆ ದಿನವಿಡಿ ಕಾರ್ಯಾಲಯದ ಎದುರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನೂರಾರು ರುಪಾಯಿ ಖರ್ಚು ಮಾಡಿಕೊಂಡು ಬಂದರು ಕಾರ್ಡ್ ಕೊಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಹಿಂದೆ ಪಡಿತರ ಚೀಟಿ ಮುದ್ರಣದ ವ್ಯವಸ್ಥೆಯನ್ನು ಹೊಂದಿದ್ದ ಖಾಸಗಿ ಸಂಸ್ಥೆಯೊಂದು ಬೇಕಾಬಿಟ್ಟಿ ಕಾರ್ಡ್‌ಗಳನ್ನು ಮಾಡಿ ಇಲ್ಲದವರ ಫೋಟೋ, ಯಾರದೋ ಫೋಟೋ ಮತ್ಯಾರದೋ ಹೆಸರು ಹೀಗೆ ಇಡಿ ವ್ಯವಸ್ಥೆಯನ್ನೇ ಹಾಳುಗೆಡವಿ ಈಗ ಜನಸಾಮಾನ್ಯರು ಪರದಾಡುವಂತೆ ಮಾಡಿದೆ. ಈ ಅವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸದೇ ಜನಸಾಮಾನ್ಯರು ನಿತ್ಯ ಪರದಾಡುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಗ್ರಾಮೀಣ ಭಾಗದಲ್ಲಿ ಅತ್ಯಂತ ಸಡಗರದಿಂದ ನಾಗರಪಂಚಮಿ ಹಬ್ಬ ಆಚರಣೆ ಮಾಡುತ್ತಿದ್ದು, ಎಲ್ಲವನ್ನು ಬಿಟ್ಟು, ಹೊಲದಲ್ಲಿಯ ಕೂಲಿ ಕೆಲಸ ಸ್ಥಗಿತಗೊಳಿಸಿ ಎರಡು ದಿನಗಳಿಂದ ಬೆಳಗ್ಗೆ 5 ಗಂಟೆಗೆ ಪಡಿತರ ಚೀಟಿಗಾಗಿ ತಹಸೀಲ್ದಾರ್ ಕಾರ್ಯಾಲಯದ ಬಾಗಿಲು ಕಾಯುತ್ತಿದ್ದು, ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ತಹಸೀಲ್ದಾರ್ ಸಾಹೇಬರನ್ನು ವಿಚಾರಿಸಿದರೆ ನಿಮ್ಮನ್ನು ಇಲ್ಲಿಗೆ ಬರಲು ಹೇಳಿದವರು ಯಾರು ಎಂದು ನಮ್ಮನ್ನೇ ದಬಾಯಿಸುತ್ತಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com