- ನಾರಾಯಣ ಹೆಗಡೆ
ಯಾದಗಿರಿ: ಬೀಡಿ ಕಟ್ಟಿಯೇ ಜೀವನ ಸಾಗಿಸುತ್ತಿರುವವರಿಗೆ ಸರ್ಕಾರ ಒಂದೂ ಮನೆಯನ್ನೂ ಕಟ್ಟಿಕೊಟ್ಟಿಲ್ಲ. ಕೇಂದ್ರ ಸರ್ಕಾರ ಇಲ್ಲಿಯ ವಸತಿ ರಹಿತ ಬೀಡಿ ಕಾರ್ಮಿಕರಿಗೆ 300 ಮನೆ ಮಂಜೂರು ಮಾಡಿ ವರ್ಷಗಳು ಎರಡರಾದರೂ ರಾಜ್ಯ ಸರ್ಕಾರದ ವಿಳಂಬದಿಂದ ಸೂರು ಇವರಿಗೆ ದೂರವಾಗಿದೆ.
ಗಾಂಧಿ ಚೌಕ್ ಪ್ರದೇಶದಲ್ಲಿರುವ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಸಾವಿರಾರು ಮಂದಿಗೆ ಬೀಡಿ ಕಟ್ಟುವುದೇ ನಿತ್ಯದ ಕಾಯಕ. ನಿತ್ಯ ಗರಿಷ್ಠ 100 ಸಂಪಾದಿಸವುದೂ ಇವರಿಗೆ ಕಷ್ಟ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕಾದರೂ ಇವರಿಗೆ ಸಾಲ ಮಾಡುವುದು ಅನಿವಾರ್ಯವಾಗುತ್ತದೆ.
ಇವರಲ್ಲಿ ಅನೇಕರಿಗೆ ಮನೆ ಇಲ್ಲದಿರುವುದನ್ನು ಗಮನಿಸಿದ ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಎರಡು ವರ್ಷಗಳ ಹಿಂದೆಯೇ 300 ಮನೆ ಮಂಜೂರಿ ಮಾಡಿಸಿದ್ದಾರೆ. ಆದರೆ ಅದಕ್ಕೆ ಅಗತ್ಯವಿರುವ ಸ್ಥಳವನ್ನು ಜಿಲ್ಲಾಡಳಿತ ಗುರುತಿಸಿ ನೀಡಬೇಕಾಗಿದ್ದು, ಆ ಕಾರ್ಯವಿನ್ನೂ ಆಗಿಲ್ಲ. ಇದರಿಂದ ನಿವೇಶನ ರಹಿತ ಇಲ್ಲಿಯ ಬೀಡಿ ಕಾರ್ಮಿಕರ ಮನೆ ಕನಸು ಕನಸಾಗಿಯೇ ಉಳಿದಿದೆ.
ಇಚ್ಛಾಶಕ್ತಿ ಕೊರತೆ: ಬೀಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಜತೆಗೆ ರಾಜ್ಯದ ಅನೇಕ ಯೋಜನೆಗಳಡಿಯಲ್ಲೂ ಇವರನ್ನು ಫಲಾನುಭವಿಗಳೆಂದು ಪರಿಗಣಿಸಬಹುದಾಗಿದೆ. ಆದರೆ ಬಡ ಬೀಡಿ ಕಾರ್ಮಿಕರ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಕೇಂದ್ರ ಸಚಿವ ಖರ್ಗೆ ಹೆಸರು ಹೇಳಿಕೊಂಡು ಇಲ್ಲಿಯವರು ಮತಭಿಕ್ಷೆ ಬೇಡುತ್ತಾರೆ. ವಿವಿಧ ವಸತಿ ಯೋಜನೆಗಳಲ್ಲಿ ಮನೆ ನೀಡಲು ಅವಕಾಶವಿದ್ದರೂ ನೀಡುತ್ತಿಲ್ಲ. ನಗರಸಭೆಯಿಂದಲೂ ಆಶ್ರಯ ಯೋಜನೆಯಡಿ ಅನೇಕ ಫಲಾನುಭವಿಗಳ ಪಟ್ಟಿ ತಯಾರಿಸಿದ್ದರೂ ಅದಕ್ಕೆ ಶಾಸಕರ ನೇತೃತ್ವದ ಸಮಿತಿ ಅಸ್ತು ಎಂದಿಲ್ಲ. ಆದ್ದರಿಂದ ಬೀಡಿ ಕಾರ್ಮಿಕರ ಗೋಳು ತಂಬಾಕಿನ ಘಾಟು ವಾಸನೆ ಮಧ್ಯೆ ಕರಗಿ ಹೋಗುತ್ತಿದೆ.
ಆಸ್ಪತ್ರೆ ಮಂಜೂರು: ಬೀಡಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಕೇಂದ್ರ ಕಾರ್ಮಿಕ ಇಲಾಖೆಯ ನಿರ್ದೇಶನ ಮೇರೆಗೆ ಬೀಡಿ ಕಾರ್ಮಿಕರ ಸರ್ವೇ ನಡೆಸಲಾಗಿದೆ. ಸುಮಾರು 3400 ಬೀಡಿ ಕಾರ್ಮಿಕರನ್ನು ಗುರಿತಿಸಿ, 2500 ಜನರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. 2011ನೇ ಸಾಲಿನಲ್ಲಿ ಸೆಂಟ್ರಲ್ ಬೀಡಿ ವರ್ಕರ್ಸ್ ವೆಲ್ಫೇರ್ ಬೋರ್ಡ್ನಿಂದ 20 ಬೆಡ್ಗಳ ಅತ್ಯಾಧುನಿಕ ಆಸ್ಪತ್ರೆ ಮಂಜೂರಿಯಾಗಿದೆ. ಆದರೆ ನೂತನ ಸುಸಜ್ಜಿತ ಆಸ್ಪತ್ರೆ ಸೌಲಭ್ಯ ಇಲ್ಲಿಯ ಬೀಡಿ ಕಾರ್ಮಿಕರಿಗೆ ಸಿಗೋದು ಯಾವಾಗ ಮಾತ್ರ ಗೊತ್ತಿಲ್ಲ.
ಜಿಲ್ಲಾಡಳಿತ ಸ್ಪಂದಿಸಬೇಕಿದೆ: ಕೇಂದ್ರದಿಂದ ಇಲ್ಲಿಯ ಬೀಡಿ ಕಾರ್ಮಿಕರಿಗೆ ಸಿಕ್ಕ ಯೋಜನೆಯನ್ನು ಶೀಘ್ರದಲ್ಲಿ ಅವರಿಗೆ ತಲುಪಿಸಲು ಜಿಲ್ಲಾಡಳಿತ ಅಗತ್ಯ ಗಮನ ನೀಡಬೇಕಿದೆ. ಅನಾರೋಗ್ಯದಿಂದ ಬಳಲುತ್ತಿರುವ ಬೀಡಿ ಕಾರ್ಮಿಕರು ಸೂರಿಲ್ಲದೆ ಬೀದಿಗೆ ಬಂದವರಿದ್ದಾರೆ. ಕೇಂದ್ರದಿಂದ ದೊರೆತ ಅನುದಾನವನ್ನು ಫಲಾನುಭವಿಗಳಿಗೆ ದೊರೆಯುವ ಮಾಡುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದ್ದು, ಈ ಕಾರ್ಯ ಶೀಘ್ರದಲ್ಲಿ ಆಗಬೇಕಿದೆ. ಜತೆಗೆ ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೀಡಿ ಕಾರ್ಮಿಕರಿಗೆ ತುಸು ನೆಮ್ಮದಿ ಸಿಗಬಹುದು.