ಗುಲ್ಬರ್ಗ: ಬೆಂಗಳೂರಿನ ಅಕ್ಕ ಸಾಹಸ ಪ್ರವಾಸ ಸಂಸ್ಥೆಯವರು ಆಯೋಜಿಸಿರುವ ಹಿರಿಯ ಐಎಎಸ್ ಅಧಿಕಾರಿ ಮದನಗೋಪಾಲ್ ಅವರು ಕ್ಲಿಕ್ಕಿಸಿರುವ ಕೈಲಾಸ ಮಾನಸ ಸರೋವರ ಸುತ್ತಲಿನ ಆಯ್ದ 32 ಛಾಯಾಚಿತ್ರಗಳ ಪ್ರದರ್ಶನ ಗುಲ್ಬರ್ಗದಲ್ಲಿ ಶುಕ್ರವಾರ ಆರಂಭವಾಯ್ತು. ಕಾಟ್ಮಂಡುವಿನ ಕೈಲಾಸ ಮಾನಸ ಸರೋವರ ಪರಿಕ್ರಮದ ಈಶ್ವರ ಕ್ಷತ್ರಿಯ ಇದನ್ನು ಉದ್ಘಾಟಿಸಿದರು. 2009ರಲ್ಲಿ ಮದನ ಗೋಪಾಲ್ ನಡೆಸಿದ ಕೈಲಾಸ ಯಾತ್ರೆಯ ಫಲವೇ ಈ ಫೋಟೋಗ್ರಾಫ್ಗಳು. ಇವುಗಳ ಪ್ರದರ್ಶನದ ಮೂಲಕ ಕೈಲಾಸ ಪರ್ವತದ ಯಾತ್ರೆಯ ಕುರಿತಂತೆ ಜನರಲ್ಲಿ ಕುತೂಹಲ, ಜಾಗೃತಿ ಮೂಡಿಸುವುದೇ ಅಕ್ಕ ಸಂಸ್ಥೆ ಉದ್ದೇಶ ಎಂದು ನಿಸರ್ಗ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಸಂಸ್ಥೆಯಡಿಯಲ್ಲಿಯೇ ಕೈಲಾಸ ಯಾತ್ರೆಗೂ ವ್ಯವಸ್ಥೆ ಮಾಡಲಾಗುತ್ತದೆ. ಆಸಕ್ತರು ನೇರವಾಗಿ ಸಂಪರ್ಕಿಸಬಹುದು ಎಂದರಲ್ಲದೆ ರಾಜ್ಯ ಸರ್ಕಾರ ಕೈಲಾಸ ಯಾತ್ರೆಗೆ ಹೋಗಿ ಬರುವವರಿಗೆ ನೀಡುವ ರಿಯಾಯ್ತಿ ಮೊತ್ತ 30 ರಿಂದ 50 ಸಾವಿರಕ್ಕೆ ಹೆಚ್ಚಿಸಿದಲ್ಲಿ ಅನುಕೂಲ ಎಂದರು. ಗುಲ್ಬರ್ಗದ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಗ್ಯಾಲರಿಯಲ್ಲಿ ಈ ಫೋಟೋಗ್ರಫಿ ಪ್ರದರ್ಶನ ಆರಂಭವಾಗಿದ್ದು ಫೆ.2 ಶನಿವಾರ ಇಡೀ ದಿನ ಇದು ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಆಸಕ್ತರು ತಮ್ಮ ಹೆಸರು ನೊಂದಾಯಿಸಬಹುದು.