ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಕೊಲ್ಲೂರ ಗ್ರಾಮದಲ್ಲಿ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಗ್ರಾಪಂ ಕಚೇರಿಯ ಮುಂದೆ ಸಾಂಕೇತಿಕ ಧರಣಿ ನಡೆಸಿ ಪ್ರತಿಭಟಿಸಿದರು.
ಗ್ರಾಪಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು, ಕೊಡ ನೀರಿಗಾಗಿ ದೂರದ ಭೀಮಾ ನದಿಗೆ ಹೋಗುವ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ನೀರು ಕೊಡಲು ಪಟ್ಟು ಹಿಡಿದರು.
ಧರಣಿ ನಿರತರಿಗೆ ಬೆಂಬಲಿಸಿ ಮಾತನಾಡಿದ ಜೆಡಿಎಸ್ ಮುಖಂಡ ಬಸವರಾಜ ಬೆಣ್ಣೂರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಲಿನ ನಿವಾಸಿಗಳು ಕೊಡ ನೀರಿಗಾಗಿ ಅಲೆಯುವಂತಾಗಿದೆ ಎಂದು ದೂರಿ, ಇದು ಗ್ರಾಪಂ ಚುನಾಯಿತಿ ಸದಸ್ಯರ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ ಎಂದು ಹೇಳಿ, ಚುನಾಯಿತಿ ಪ್ರತಿನಿಧಿಗಳು, ಅಧಿಕಾರಿಗಳು ಕನಿಷ್ಟ ಕುಡಿವ ನೀರು ಕೊಡುವಲ್ಲಿ ವಿಫಲರಾಗಿದ್ದು, ಇವರು ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಉಪ ತಹಸೀಲ್ದಾರ್ ಶಂತಕುಮಾರ, ಜಿಪಂ ಜೆಇ ಸತ್ರೋದ್ದಿನ್ರಿಗೆ ಮನವಿ ಸಲ್ಲಿಸಲಾಯಿತು. 10 ದಿನದ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಅಶ್ವಾಸನೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.