ಕೆಂಭಾವಿ: ಕಳೆದೆರಡು ವರ್ಷಗಳಿಂದ ಮಳೆಯಿಲ್ಲದೇ ಬರಿದಾಗಿದ್ದ ಕೆರೆಗೆ ಈಗ ನೀರು ಬಂದಿದೆ. ನಿಧಾನವಾಗಿ ಕೆರೆ ಭರ್ತಿಯಾಗುತ್ತಿದ್ದು, ಜಾನುವಾರುಗಳಿಗೆ ಕುಡಿಯಲು ನೀರು ಸಿಕ್ಕಂತಾಗಿದೆ.
- ಹೌದು. ಮಳೆಯಿಲ್ಲದೇ ಕೆರೆ ಹೇಗೆ ಭರ್ತಿಯಾಗುತ್ತಿದೆ ಎಂದು ಆಶ್ಚರ್ಯವಾಗಬಹುದು. ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಬತ್ತಿ ಹೋಗಿದ್ದ ಇಲ್ಲಿಯ ಕೆಂಗೇರಿ ಕೆರೆಗೆ ನೀರು ತುಂಬಿಸಲು ಸ್ಥಳೀಯ ರೈತರೇ ಮುಂಗಾಗಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆಯ ಶಹಾಪುರ ಶಾಖಾ ಕಾಲುವೆಯಿಂದ ಹಳ್ಳಕ್ಕೆ ಪೋಲಾಗುತ್ತಿರುವ ನೀರನ್ನು ಕೆರೆಗೆ ಹೋಗುವಂತೆ ಮಾಡಿ ಕೆರೆಯಲ್ಲಿ ನೀರು ತುಂಬಿಸುವ ಕೆಲಸಕ್ಕೆ ರೈತರಾದ ಬಾಬುಗೌಡ ಮಾಲಿಪಾಟೀಲ, ಮಲ್ಲಿನಾಥಗೌಡ ಪೊಲೀಸ್ ಪಾಟೀಲ, ಅಲ್ಲಾಉದ್ದೀನ್ ಕೊಕರ್ ಶ್ರಮ ಹಾಕಿದ್ದಾರೆ. ಸ್ವಂತ ಖರ್ಚಿನಲ್ಲಿ ಸುಮಾರು 100 ಮೀ. ನಾಲೆ ತೆಗೆಸಿ ನೀರು ಕೆಂಗೇರಿ ಕೆರೆಗೆ ಸೇರುವಂತೆ ಮಾಡಿದ್ದಾರೆ.
ಬತ್ತಿ ಹೋಗಿತ್ತು: ಸಮರ್ಪಕ ಮಳೆಯಾಗದ್ದರಿಂದ ಕೆಂಗೆರಿ ಕೆರೆ ಬತ್ತಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿತ್ತು. ಮೊದಲು ಕೆರೆ ತುಂಬಿದಾಗ ಪಟ್ಟಣದ ಜಾನುವಾರುಗಳಿಗೆ ನೀರಿನ ಅಭಾವವಾಗಿರಲಿಲ್ಲ. ಬಹುತೇಕ ಜಾನುವಾರುಗಳು ಬೇಸಿಗೆಯಲ್ಲಿ ಕೆರೆಯ ಸುತ್ತಲೂ ಬೆಳೆದ ಮೇವನ್ನು ಮೇಯ್ದು ಇಲ್ಲಿಯ ನೀರನ್ನು ಕುಡಿಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ತೊಂದರೆ ಜೊತೆಗೆ ಮೇವು ಸಿಗದಂತಾಗುತ್ತಿತ್ತು. ಇದನ್ನು ಮನಗಂಡು ಈ ಕಾರ್ಯಕ್ಕೆ ಮುಂದಾಗಿದ್ದಾಗಿ ಬಾಬುಗೌಡರು ಹೇಳುತ್ತಾರೆ.
ವರದಾನವಾದೀತೆಂದು ಕ್ರಮ: ಕೆಂಗೇರಿ ಕೆರೆ ತುಂಬಾ ಪುರಾತನವಾಗಿದ್ದು ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದಾಗಿ ನೀರು ಸಂಗ್ರಹಣೆಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಈ ಹಿಂದೆ ಎಂದೂ ಕೆರೆ ಬತ್ತಿದ ಇತಿಹಾಸವೇ ಇಲ್ಲ. ಕೆರೆಯಲ್ಲಿ ನೀರಿದ್ದರೆ ಗ್ರಾಮದ ಎಲ್ಲ ತೆರೆದ ಬಾವಿ ಹಾಗೂ ಕೊಳವೆಬಾವಿಗಳು ಬತ್ತುತ್ತಿರಲಿಲ್ಲ. ಆದರೆ ಈಗ ಕೆರೆಯಲ್ಲಿ ನೀರಿಲ್ಲದ್ದರಿಂದ ಕೊಳವೆ ಬಾವಿಗಳಲ್ಲಿಯೂ ನೀರು ಬರುತ್ತಿಲ್ಲ. ಆದ್ದರಿಂದ ವೃಥಾ ಪೋಲಾಗುವ ಕಾಲುವೆ ನೀರನ್ನು ತಿರುಗಿಸಿ ಕೆರೆ ತುಂಬಿಸಿದರೆ ಇಡೀ ಗ್ರಾಮಕ್ಕೆ ವರದಾನವಾದೀತು ಎಂದುಕೊಂಡು ಈ ಕಾರ್ಯ ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ.
ಕೆರೆ ಹೂಳೆತ್ತಲಿ: ಸರ್ಕಾರ ಕೆರೆಗಳ ಜೀರ್ಣೋದ್ಧಾರಕ್ಕಾಗಿ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಿದೆ. ಕೆಂಗೇರಿ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಇಲ್ಲಿಯ ಜಾನುವಾರು ಸೇರಿದಂತೆ ನೂರಾರು ಎಕರೆ ಭೂಮಿ ನೀರಾವರಿಯಾಗುವುದರ ಜತೆಗೆ ಪಟ್ಟಣದ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ ಎಂದು ಮಲ್ಲಿನಾಥಗೌಡ ಪೊಲೀಸ್ ಪಾಟೀಲ್ ಮತ್ತು ಅಲ್ಲಾಉದ್ದೀನ್ ಕೊಕರ್ ಅಭಿಪ್ರಾಯ ಪಡುತ್ತಾರೆ.
ಈ ರೈತರು ಕೆರೆ ತುಂಬಿಸಲು ಮಾಡುತ್ತಿರುವ ಸಾಹಸ ಮಾತ್ರ ಮೆಚ್ಚುವಂಥದ್ದು. ಮಳೆ ಇಲ್ಲದೆ ಬರಡಾಗಿದ್ದ ಕೆರೆಗೆ, ಪೋಲಾಗುತ್ತಿರುವ ಕಾಲುವೆ ನೀರನ್ನು ಬಳಸುವಂತೆ ಮಾಡಿದ್ದಾರೆ. ಕಾಲುವೆ ಕೊರೆಸಿ ರಸ್ತೆಗೆ ಪೈಪ್ ಹಾಕಿಸಿ ಸ್ವಂತ ಖರ್ಚಿನಲ್ಲಿ ಎಲ್ಲ ಕೆಲಸ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.