ಗುರುಮಠಕಲ್: ಬಹು ವರ್ಷಗಳ ಹೋರಾಟದ ಫಲವಾಗಿ ಸಂವಿಧಾನದ 371(ಜೆ)ನೇ ಕಲಂ ಅನುಷ್ಠಾನಗೊಳ್ಳುತ್ತಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗ, ಶಿಕ್ಷಣ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಕೆಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಯ್ದೆ ಜಾರಿ ಅಷ್ಟು ಸುಲಭವಾಗಿ ಆಗಿಲ್ಲ. ಇದರ ಹಿಂದೆ ಅವಿರತ ಪರಿಶ್ರಮವಿದೆ. ಈ ಭಾಗದ ಜನರ ಒತ್ತಾಯದಂತೆ ಈಗ ಸಂವಿಧಾನದ 371ನೇ ಕಲಂ ತಿದ್ದುಪಡಿಯಾಗಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಕ್ಕಂತಾಗಿದೆ. ಶಿಕ್ಷಣ, ಉದ್ಯೋಗ, ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿದೆ. ಇದರ ಪ್ರಯೋಜನವನ್ನು ಬಳಸಿಕೊಂಡು ಮಕ್ಕಳ ಭವಿಷ್ಯ ರೂಪಿಸಲು ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.
ನಿಮ್ಮೆಲ್ಲರ ಆಶೀರ್ವಾದ ಕಾರಣ: ನನ್ನ ರಾಜಕೀಯ ಜೀವನ ಆರಂಭವಾದದ್ದೇ ಗುರುಮಠಕಲ್ ಮತಕ್ಷೇತ್ರದಿಂದ. ನಿಮ್ಮೆಲ್ಲರ ಆಶೀರ್ವಾದದಿಂದಲೇ ಸಂವಿಧಾನದ 371ನೇ ಕಲಂ ಜಾರಿಯಾಗಿದೆ. ನನ್ನ ರಾಜಕೀಯ ಯಶಸ್ಸಿನ ಹಿಂದೆ ಪ್ರತಿಯೊಂದು ಹಂತದಲ್ಲೂ ಈ ಭಾಗದ ಜನತೆ ಬೆಂಬಲಿಸಿ ಬೆಳೆಸಿದ್ದಾರೆ. ಈ ಸ್ಥಾನಕ್ಕೆ ಬಂದಿರುವುದಕ್ಕೆ ನಿಮ್ಮೆಲ್ಲರ ಕೊಡುಗೆ ಅಪಾರ. ಗುರುಮಠಕಲ್ ನನ್ನ ಮನೆ ಇದ್ದಂತೆ. ನಾನು ಇಲ್ಲಿಯ ಮನೆ ಮಗನಾಗಿದ್ದು, ಸಂಸತ್ ಸದಸ್ಯನಾಗಿ, ಮಂತ್ರಿಯಾಗಲು ನೀವು ಕಾರಣ ಎಂದು ಖರ್ಗೆ ಹೇಳಿದರು.
ಯೋಗ್ಯರನ್ನು ಆಯ್ಕೆಮಾಡಿ: ಕಾಯ್ದೆ ಜಾರಿಯ ಐತಿಹಾಸಿಕ ನಿರ್ಣಯ ತೆಗೆದುಕೊಂಡ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ ಖರ್ಗೆ, ಕಾನೂನು ಮಾಡಬೇಕಾದರೆ ಕಷ್ಟವಿದ್ದು, ಅದನ್ನು ಉಳಿಸಿಕೊಂಡು ಹೋಗುವ ಅವಶ್ಯಕತೆಯಿದೆ. ಭ್ರಷ್ಟಾಚಾರಿ, ಅಸಮರ್ಥ ನಾಯಕರನ್ನು ಆಯ್ಕೆ ಮಾಡಿದರೆ ಮಸೂದೆ ಜಾರಿಯಾದರೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದರು.
ಯುವಕರ ಭವಿಷ್ಯ ನಿರ್ಧಾರ: ಸಂಸದ ಧರ್ಮಸಿಂಗ್ ಮಾತನಾಡಿ, ಹೈ-ಕ ಭಾಗದ ಜನರ ಬಹುದಿನದ ಕನಸಾದ 371(ಜೆ) ಕಲಂ ಜಾರಿಯಾಗಿದ್ದು, ಈ ಮಸೂದೆ ಯುವಕರ ಭವಿಷ್ಯ ರೂಪಿಸುತ್ತದೆ ಎಂದರು.
ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ, ಅಲ್ಲಂಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಮಾತನಾಡಿದರು. ಶಾಸಕ ಶರಣಬಸಪ್ಪ ದರ್ಶನಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಜಿಪಂ ಅಧ್ಯಕ್ಷೆ ಮರೆಮ್ಮ ಶಾಣೆನೋರ್, ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮೀ ಚಂಡ್ರಿಕಿ, ಚಿದಾನಂದಪ್ಪ ಕಾಳಬೆಳಗುಂದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಹತ್ತಿಕುಣಿ, ಸಾಯಿಬಣ್ಣ ಬೋರಬಂಡಾ, ಮಹಿಪಾಲರೆಡ್ಡಿ ದುಪ್ಪಲ್ಲಿ, ಭೀಮರೆಡ್ಡಿ ಉಟ್ಕುರ, ಬಾಲಪ್ಪ ನೀರಟ್ಟಿ, ಭಾಗಣ್ಣಗೌಡ ಸಂಕನೂರ, ಬುಚ್ಚಣ್ಣ ಜೈಗ್ರಾಂ, ವಿಶ್ವನಾಥ ನೀಲಹಳ್ಳಿ, ಲಕ್ಷ್ಮರೆಡ್ಡಿ ಅನಪುರ, ಮಲ್ಲರೆಡ್ಡಿ ಕಣೇಕಲ್, ಭೀಮರೆಡ್ಡಿ ಶೆಟ್ಟಹಳ್ಳಿ, ಕಮಲಾ ಪಾಟೀಲ್ ಇತರರಿದ್ದರು.