ಮೂಲ ವಿಜ್ಞಾನ ಆಸಕ್ತಿ ಬೆಳೆಸಿಕೊಳ್ಳಿ

Updated on: 

ಯಾದಗಿರಿ: ಮಾಹಿತಿ ತಂತ್ರಜ್ಞಾನ ಇಂದು ವ್ಯಾಪಕವಾಗಿ ಬೆಳೆಯುತ್ತಿದೆ. ಆದರೆ ಮೂಲ ವಿಜ್ಞಾನದತ್ತ ಆಸಕ್ತಿ ಕ್ಷೀಣಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ ಮೂಲ ವಿಜ್ಞಾನದ ಕಡೆ ಅವರಲ್ಲಿ ಆಸಕ್ತಿ ಬೆಳೆಸಬೇಕೆಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಹೇಳಿದರು.
 ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ವಿದ್ಯಾ ಜಾಗೃತಿ ಇವುಗಳ ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
ಸಂದೇಹ ನಿವಾರಿಸಿಕೊಳ್ಳಿ: ಅಸಾಧ್ಯ ಎನ್ನುವುದು ಇಂದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಮತ್ತು ತಲುಪಬೇಕಾದ ಗುರಿಯನ್ನು ಹೊಂದಿರಬೇಕು. ಇಂದು ಶಿಕ್ಷಣ ಎಲ್ಲ ರೀತಿಯಲ್ಲೂ ಮುಂದುವರಿದಿದೆ. ಸಂಶೋಧನೆಗೆ ಅಗತ್ಯವಾದ ಪರಿಸರವಿದೆ. ಆದ್ದರಿಂದ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಸಂಶೋಧನೆಗೆ ಮುಂದಾಗಬೇಕು. ಇಂದಿನ ವಿದ್ಯಾರ್ಥಿಗಳು ಭಾವೀ ವಿಜ್ಞಾನಿಗಳಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಅಭಿರುಚಿಯನ್ನು ಗಮನಿಸಿ ಪ್ರೋತ್ಸಾಹಿಸಬೇಕು. ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.
  ಡಿಡಿಪಿಐ ರಾಮಾಂಜನೇಯ ಮಾತನಾಡಿ, ವಿಜ್ಞಾನವಿಲ್ಲದೇ ಬದುಕಿಲ್ಲ ಎಂಬಂಥ ಸ್ಥಿತಿ ಇಂದು ನಿರ್ಮಾಣವಾಗಿದೆ. ಎಲ್ಲ ರಂಗಗಳಲ್ಲೂ ವಿಜ್ಞಾನ ಹಾಸುಹೊಕ್ಕಾಗಿದೆ. ಆದರೆ ಮೂಲ ವಿಜ್ಞಾನ ಕಡೆಗಣಿಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನಿಗಳೇ ಅವರ ಬಳಿಗೆ ಬರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಜ್ಞಾನದ ಪ್ರಗತಿಯೇ ಆಧಾರ: ರಾಜ್ಯ ವಿಜ್ಞಾನ ಪರಿಷತ್ ಖಜಾಂಚಿ ಗಿರೀಶ ಕಡ್ಲೇವಾಡ ಮಾತನಾಡಿ, ಒಂದು ದೇಶದ ಪ್ರಗತಿ ಅಲ್ಲಿಯ ವಿಜ್ಞಾನದ ಪ್ರಗತಿಯನ್ನು ಅವಲಂಬಿಸಿದೆ. ಭಾರತದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ವಿಜ್ಞಾನಿಗಳು ಇಲ್ಲ. ವಿಜ್ಞಾನಿಗಳೂ ಅವನತಿಯ ಹಾದಿಯಲ್ಲಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು. ಎಂಜಿನಿಯರಿಂಗ್ ಹಾಗೂ ಮಾಹಿತ ತಂತ್ರಜ್ಞಾನಕ್ಕೆ ಕೊಡುತ್ತಿರುವ ಒತ್ತನ್ನು ನಾವಿಂದು ಮೂಲ ವಿಜ್ಞಾನಕ್ಕೆ ಕೊಡುತ್ತಿಲ್ಲ. ಆದ್ದರಿಂದ ಮೂಲ ವಿಜ್ಞಾನವನ್ನು ಜನಪ್ರಿಯಗೊಳಿಸಬೇಕಿದೆ. ವಿಜ್ಞಾನವನ್ನು ಜನರ ಬಳಿಗೆ ತಲುಪಿಸಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕಿದೆ ಎಂದು ಹೇಳಿದರು.
  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಕೆ.ವಿ. ಗುರುರಾಜ, ಬೆಂಗಳೂರು ವಿವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಕಾಗಲಿ, ಫಾದರ್ ರಜ್ಜಿ, ಬಿಇಒ ಮಜರ್ ಹುಸೇನ, ಕೆ.ರಾಯಪ್ಪ ರೆಡ್ಡಿ, ಬಿ.ವೆಂಕೋಬ, ರಾಜಶೇಖರಗೌಡ ಇತರರು ಇದ್ದರು.
  ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವಿದ್ಯಾ ಜಾಗೃತಿ ಸಂಚಾಲಕ ಶ್ರೀಶೈಲ ಫೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಪ್ರಕಾಶ ಘನಾತೆ ಸ್ವಾಗತಿಸಿದರು. ಎಂ.ಎಸ್. ಪಾಟೀಲ ನಿರೂಪಿಸಿದರು. ರಾಮಕೃಷ್ಣ ವಂದಿಸಿದರು.
ಸಂವಾದ: ನಂತರ ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಜರುಗಿತು. ಕಪ್ಪೆಗಳ ಜೀವನ ತಿಳಿಯೋಣ, ಬಾಹ್ಯಾಕಾಶ, ಕೃಷಿಯಲ್ಲಿ ಬೇಳೆ ಕಾಳುಗಳು ಮತ್ತು ತಳಿಯ ಅಭಿವೃದ್ಧಿ, ಪವಾಡ ರಹಸ್ಯ ಬಯಲು ಮುಂತಾದ ವಿಷಯಗಳ ಕುರಿತು ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com