ಅನುದಾನ ಬಳಕೆಯಲ್ಲಿ ಆಮೆವೇಗ

Updated on: 

ಚಿಂಚೋಳಿ: ತಾಲೂಕಿನಲ್ಲಿ ಪಂಚಾಯ್ತಿ ಹಂತದಲ್ಲಿ ಕರ ವಸೂಲಿ ನಡೆಯುತ್ತಿಲ್ಲ ಎಂದು ಜಿಲ್ಲೆಯ ಜಿಪಂ ಸಿಇಒ ಪಲ್ಲವಿ ಆಕುರಾತಿ ಗರಂ ಆಗಿದ್ದಾರೆ. ತಾಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಮಾತನಾಡಿ, ಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಾಣದೆ ಹೋದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಿಡಿಒಗಳಿಗೆ ಎಚ್ಚರಿಸಿದ್ದಾರೆ.
ಪದೋನ್ನತಿಗೆ ಬ್ರೇಕ್ ಎಚ್ಚರಿಕೆ: ತಾಲೂಕಿನ 32 ಗ್ರಾಪಂ.ಗಳಲ್ಲಿ ಸಾರ್ವಜನಿಕರ ಆಸ್ತಿ ಕರ 5.36 ಕೋಟಿ ಬಾಕಿ ಇದೆ. ಪಿಡಿಒ ಮತ್ತು ಕಾರ್ಯದರ್ಶಿಗಳು ಸರಿಯಾಗಿ ಆಸ್ತಿ ಕರ ವಸೂಲಿ ಮಾಡುತ್ತಿಲ್ಲ. ಜಿಲ್ಲೆಯಲ್ಲಿಯೇ ಚಿಂಚೋಳಿ ತಾಲೂಕು ಕರ ವಸೂಲಿಯಲ್ಲಿ ಅತ್ಯಂತ ಹಿಂದುಳಿದೆ. ಫೆಬ್ರವರಿ ಅಂತ್ಯದವರೆಗೆ ಬಾಕಿ ಇರುವ ಆಸ್ತಿ ಕರ ವಸೂಲಿ ಮಾಡುವವರೆಗೆ ಪದೋನ್ನತಿ ಮಾಡದಂತೆ ತಡೆ ಹಿಡಿಯಲಾಗುವುದೆಂದು ಸಿಇಒ ಪಲ್ಲವಿ ಆಕುರಾತಿ ಎಚ್ಚರಿಕೆ ನೀಡಿದರು. ತಾಲೂಕಿನಲ್ಲಿ 6.70 ಕೋಟಿ ಆಸ್ತಿ ಕರ ವಸೂಲಿ ಗುರಿ ಇದೆ. ಆದರೆ ಇಲ್ಲಿಯವರೆಗೆ ಕೇವಲ 70 ಲಕ್ಷ ಆಸ್ತಿ ಕರ ವಸೂಲಿಯಾಗಿದೆ. ಪಿಡಿಒ ಮತ್ತು ಕಾರ್ಯದರ್ಶಿಗಳ ಮುದ್ರಾಂಕ ಶುಲ್ಕ 12.67 ಲಕ್ಷ ತಾಲೂಕಿನ ಎಲ್ಲ ಗ್ರಾಪಂ.ಗಳಿಗೆ ನೀಡಲಾಗಿದೆ. ಆದರೆ ಕೇವಲ 4.67 ಲಕ್ಷ ಖರ್ಚು ಮಾಡಲಾಗಿದೆ. ಇನ್ನೂ 8 ಲಕ್ಷ ಹಾಗೇ ಉಳಿದಿದೆ. ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಗಾಗಿ ಬಂದ ಹಣ ಖರ್ಚು ಮಾಡದಿದ್ದರೆ ಅದಕ್ಕೆ ನೀವೇ ಹೊಣೆಗಾರರು ಎಂದರು.
ಅನುದಾನ ಬಳಕೆ ಅಷ್ಟಕ್ಕಷ್ಟೆ: ಜಿಪಂ ಉಪ ಕಾರ್ಯದರ್ಶಿ ವಸಂತಕುಮಾರ ಕುಲಕರ್ಣಿ ಮಾತನಾಡಿ, ತಾಪಂ.ಗೆ 13ನೇ ಹಣಕಾಸು ಅಭಿವೃದ್ಧಿಗೆ 167 ಲಕ್ಷ ನೀಡಲಾಗಿದೆ. ಆದರೆ ಇನ್ನೂ 119 ಲಕ್ಷ ಹಾಗೇ ಉಳಿದಿದೆ. ಈ ಅನುದಾನ ಖರ್ಚು ಮಾಡಿದರೆ ಹೆಚ್ಚುವರಿಯಾಗಿ 51.10 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ತಾಪಂ ಅಭಿವೃದ್ಧಿ ಅನುದಾನ 1 ಕೋಟಿಯಲ್ಲಿ ಕೇವಲ 16 ಲಕ್ಷ ಖರ್ಚು ಮಾಡಲಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ಎನ್.ಎ. ಪವಟೇಗಾರ ಸಭೆಯಲ್ಲಿ ಸಿಇಒ ಅವರ ಗಮನಕ್ಕೆ ತಂದಾಗ, ಇಲ್ಲಿನ ತಾಪಂ ಅಧಿಕಾರಿ ಜಗದೇವ ಬೈಗೊಂಡ ಅವರ  ಮೇಲ್ವಿಚಾರಣೆ ಸರಿಯಾಗಿಲ್ಲ. ಇನ್ನು ಮುಂದೆ ಪ್ರಗತಿಯಾಗದಿದ್ದರೆ ಶಿಸ್ತು ಕ್ರಮ ಕೈಕೊಳ್ಳಲಾಗುವುದೆಂದು ಸಿಇಒ ಹೇಳಿದರು.
ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿಯೇ ಗುಲ್ಬರ್ಗ ಜಿಲ್ಲೆ 30ನೇ ಸ್ಥಾನದಲ್ಲಿದೆ. ಅಭಿವೃದ್ಧಿ ಮಾಡದಿದ್ದರೆ ಸುಳ್ಳು ಹೇಳಬೇಡಿ, ಹೇಳಿಕೆಯಲ್ಲಿ ಸತ್ಯಾಂಶವಿರಲಿ ಎಂದು ಸಿಇಒ ಪಲ್ಲವಿ ತಾಕೀತು ಮಾಡಿದರು. ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಪಿ.ಡಿ. ಕೆಂಚಣ್ಣನವರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಎನ್.ಎ. ಪವಟೇಗಾರ, ಜಿಪಂ ಮುಖ್ಯ ಯೋಜನಾಧಿಕಾರಿ ವಿರೂಪಾಕ್ಷಪ್ಪ ಭಾಗವಹಿಸಿದ್ದರು. ತಾಪಂ ಅಧಿಕಾರಿ ಜಗದೇವ ಬೈಗೊಂಡ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com