ಗುಲ್ಬರ್ಗ: ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ಬೈದು, ಶಾಲೆಗೆ ಬಂದರೆ ಜೀವ ತೆಗೆಯುವೆ ಎಂದು ಬೆದರಿಕೆಯೊಡ್ಡಿರುವ ಘಟನೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಈ ಕುರಿತಂತೆ ಮಾದನ ಹಿಪ್ಪರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ನಂದಿತಾ(ಹೆಸರು ಬದಲಿಸಲಾಗಿದೆ) ದೂರು ನೀಡಿದ್ದಾಳೆ. ಅತಿಥಿ ಶಿಕ್ಷಕ ರವಿ ಕುಡಕೆ ವಿದ್ಯಾರ್ಥಿನಿ ಮನೆಗೆ ಹೋಗಿ ಅವಾಚ್ಯವಾಗಿ ಬೈದಿದ್ದಾನೆ. ವಿದ್ಯಾರ್ಥಿನಿ ಸೇರಿ ಮನೆ ಮಂದಿ ಜೀವ ತೆಗೆಯುವ ಬೆದರಿಕೆ ಸಹ ಹಾಕಿದ್ದಾನೆ ಎಂದು ನಂದಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಮಾದನ ಹಿಪ್ಪರ್ಗಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯುವಕ ಕಾಣೆ
ಇಲ್ಲಿನ ಸಿಐಬಿ ಕಾಲೋನಿ ನಿವಾಸಿ ಪ್ರತಾಪ ಊರ್ಫ್ ರಾಜು ಕಾಣೆಯಾಗಿರುವ ದೂರು ದಾಖಲಾಗಿದೆ. ಈತನ ತಂದೆ ಪಶುಪತಿ ಬೀಮನ್ ದೂರು ನೀಡಿದ್ದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಾಪ ಬೆಂಗಳೂರಿನ ರಾಮಯ್ಯ ಎಂಜಿನಿಯರಿಂಗ್ ಕಾಲೇಜು 5ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಅನುತ್ತೀರ್ಣನಾಗಿದ್ದರಿಂದ ಮನನೊಂದಿದ್ದ ಎನ್ನಲಾಗಿದೆ.