ಶಹಾಪುರ: 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ್ದು ಪ್ರಕೃತಿ ಹಾಗೂ ಜೀವಕಾರುಣ್ಯದ ಧರ್ಮವಾಗಿತ್ತು. ಶರಣರು ಬರುವುದಕ್ಕಿಂತ ಪೂರ್ವದಲ್ಲಿ ಭಯವೇ ತಮ್ಮ ಧರ್ಮಕ್ಕೆ ಬುನಾದಿಯನ್ನಾಗಿಟ್ಟು ಕಟ್ಟಿಕೊಂಡಿದ್ದರೆ ಲಿಂಗಾಯತ ಧರ್ಮ ದಯವನ್ನು ತನ್ನ ಧರ್ಮದ ತಳಹದಿಯನ್ನಾಗಿ ಮಾಡಿಕೊಂಡಿತ್ತು ಎಂದು ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕ ಸಿದ್ರಾಮಪ್ಪ ಬಾಲಪ್ಪಗೋಳ್ ನುಡಿದರು.
ಪಟ್ಟಣದ ಹಳಿಸಗರ ಬಡಾವಣೆಯಲ್ಲಿ ಬಸವ ಮಾರ್ಗ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರು- ಧರ್ಮ, ಮೂಢನಂಬಿಕೆಗಳ ಅಡಿಯಲ್ಲಿ ಸಮಾಜ ಸಿಕ್ಕು ಒದ್ದಾಡುತ್ತಿತ್ತು. ಮಹಿಳೆಯರು, ನಿಮ್ನ ವರ್ಗದವರೆಲ್ಲ ಉಳ್ಳವರ ತುಳಿತಕ್ಕೆ ಒಳಗಾಗಿ ಜೀವಂತ ಶವಗಳಾಗಿದ್ದರು. ಗುಡಿಗಳಲ್ಲಿ ಎಲ್ಲರಿಗೂ ಪ್ರವೇಶವಿರಲಿಲ್ಲ. ದೇಹವನ್ನು ದೇವಾಲಯವನ್ನಾಗಿ ಮಾಡಿಕೊಳ್ಳುತ್ತ ದೇವಾಲಯಗಳನ್ನೇ ತಿರಸ್ಕರಿಸಿ ಹೊಸ ಸಮಾಜದ ಹುಟ್ಟಿಗೆ ಕಾರಣರಾದರು ಎಂದರು.
ವಿಶ್ವವೇ ಅಚ್ಚರಿಪಡುವಂತಾಯಿತು: ವ್ಯಕ್ತಿ ಶೋಷಣೆಯ ಎಲ್ಲ ಸಂಗತಿಗಳನ್ನು ಸ್ಪಷ್ಟವಾಗಿ ತೋರಿಸುತ್ತ ಬಸವಣ್ಣನವರು ಅವುಗಳ ವಿರುದ್ಧ ಇರಿದ ಕತ್ತಿಯಾಗಿ ನಿಂತರು. ಕಾಯಕ ಹಾಗೂ ದಾಸೋಹಗಳ ವಿಭಿನ್ನ ಕಲ್ಪನೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ, ವಿಶ್ವವೇ ಅಚ್ಚರಿ ಪಡುವಂತಹ ಸಮಾಜ ಸೃಷ್ಟಿಗೆ ಕಾರಣೀಕರ್ತರಾದರು ಎಂದು ಅಭಿಪ್ರಾಯಪಟ್ಟರು.
ಪ್ರೀತಿ, ವಿಶ್ವಾಸ, ಕರುಣೆಗಳ ಸಂಗಮವಾಗಿದ್ದ ಗದ್ದಿಗಿರಾಯ ಗುಡಿ ಅವರಲ್ಲಿ ಹಲವಾರು ಉದಾತ್ತ ವಿಚಾರಗಳಿದ್ದವು. ಸಹಜವಾಗಿ ಸಾಮಾಜಿಕ ತುಡಿತವನ್ನಿಟ್ಟುಕೊಂಡ ವ್ಯಕ್ತಿಗಳನ್ನು ಬೆಂಬಲಿಸುತ್ತಿದ್ದರು. ಬಸವ ಮಾರ್ಗದ ವಿಚಾರಗಳನ್ನು ಹಚ್ಚಿಕೊಂಡು ಅಪ್ಪಿಕೊಂಡಿದ್ದರು. ಯಾರೂ ಗುರುತಿಸದ, ಸಮಾಜಕ್ಕೆ ಕೊಡುಗೆಯನ್ನು ನೀಡಿದ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸುವ ಹೃದಯ ಗುಡಿಯವರದಾಗಿತ್ತು ಎಂದು ಗುರುಬಸವಯ್ಯ ಗದ್ದುಗೆ ಹೇಳಿದರು. ರಾಯಚೂರಿನ ಶಿಕ್ಷಕ ಮಹ್ಮದ ಅಲಿಯವರನ್ನು ಸನ್ಮಾನಿಸಲಾಯಿತು. ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ, ರಾಜ್ಯ ಸಹಕಾರ ಮಹಾ ಮಂಡಳಿಯ ನಿರ್ದೇಶಕ ಗುರುನಾಥರಡ್ಡಿ ಪಾಟೀಲ ಹಳಿಸಗರ, ಬೋರಗಿಪುರದಾಳದ ತಪೋರತ್ನ ಮಹಾಲಿಂಗೇಶ್ವರ ಸ್ವಾಮೀಜಿ ಇದ್ದರು. ಶ್ವೇತಾ ಹಾಗೂ ಉಳುವೇಶ ಗುಡಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಬಳ್ಳೂರಗಿ ಸ್ವಾಗತಿಸಿದರು. ಭೀಮರಾಯ ನುಚ್ಚಿನ ವಚನ ಗೀತೆ ಹಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು.