ಯಾದಗಿರಿ: ಜನಪರ ಬಜೆಟ್ ಮಂಡಿಸುವುದಾಗಿ ಹೇಳುತ್ತಲೇ ಅದೇ ದಿನ ಭಾರೀ ಪ್ರಮಾಣದಲ್ಲಿ ಹಾಲಿನ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ. ಬೆಲೆ ಏರಿಕೆಯನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.
ನಾಚಿಕೆಗೇಡು: ಕರ್ನಾಟಕದಲ್ಲಿ ಇತರ ರಾಜ್ಯಗಳಲ್ಲಿನ ಹಾಲಿನ ಮಾರಾಟದ ಬೆಲೆಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದಾಗಿ ತುತ್ತೂರಿ ಊದುತಿದ್ದ ರಾಜ್ಯ ಸರ್ಕಾರವು ಇದೀಗ ರಾಜ್ಯದ ಹಾಲಿನ ಮಾರಾಟದ ಬೆಲೆಯಲ್ಲಿ ಪ್ರತಿ ಲೀಟರ್ಗೆ ಏಕಾಏಕಿ 4 ಏರಿಕೆ ಮಾಡಿರುವುದು ಸಮರ್ಥನೀಯವಲ್ಲ. ರೋಗಿಗಳು, ವೃದ್ಧರು ಮತ್ತು ಎಳೆಯ ಮಕ್ಕಳ ಪಾಲನೆ-ಪೋಷಣೆಗೆ ಹೆಚ್ಚು ಬಳಕೆಯಾಗುತ್ತಿದ್ದ ಜೀವನಾವಷ್ಯಕ ಆಹಾರದ ಬೆಲೆಯನ್ನು ಈ ಪರಿಯಾಗಿ ಏರಿಸಿರುವ ಬಿಜೆಪಿ ಸರ್ಕಾರವು ಇದಕ್ಕಾಗಿ ಹಾಲು ಉತ್ಪಾದಿಸುತ್ತಿರುವ ರೈತರನ್ನು ಬಳಸಿಕೊಂಡಿರುವುದು ಅತ್ಯಂತ ನಾಚಿಕೆಗೇಡಿನದಾಗಿದೆ ಎಂದು ಸಮಿತಿ ಟೀಕಿಸಿದೆ.
ಸರ್ಕಾರದ ನೆರವು ಅಗತ್ಯ: ಹಾಲು ಉತ್ಪಾದಿಸುತ್ತಿರುವ ರೈತರಿಗೆ ಸರ್ಕಾರದಿಂದ ನೆರವು ನೀಡುವುದಕ್ಕೆ ರಾಜ್ಯದ ಜನರು ತಕರಾರು ತೆಗೆಯದಿದ್ದರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದಲೇ ರೈತರನ್ನು ಇಲ್ಲಿ ಎಳೆದು ತರಲಾಗಿದೆ ಎಂದು ತಿಳಿದುಕೊಳ್ಳಲು ಹೆಚ್ಚಿನ ಜ್ಞಾನವೇನೂ ಬೇಕಾಗಿಲ್ಲ. ರಾಜ್ಯದ ಇತರ ರೈತರಂತೆ ಹಾಲು ಉತ್ಪಾದಿಸುವ ರೈತರೂ ಕಷ್ಟದಲ್ಲಿರುವುದು ನಿಜ. ಅಂತಹವರಿಗೆ ಸರ್ಕಾರದ ನೆರವು ಅಗತ್ಯ ಇದೆ. ಆದರೆ ಸರ್ಕಾರವು ಸಬ್ಸಿಡಿಯನ್ನು ನೀಡಿ ಉತ್ತೇಜಿಸಬೇಕಾಗುತ್ತದೆ. ಅದನ್ನು ಬಿಟ್ಟು ಸರ್ಕಾರ ಆ ಹೊರೆಯನ್ನು ನೇರವಾಗಿ ಹಾಲು ಬಳಸುವ ಗ್ರಾಹಕರ ಹೆಗಲಿಗೇರಿಸುತ್ತಿರುವುದು ಸರಿಯಲ್ಲ. ಹಾಲು ಉತ್ಪಾದಿಸುವ ರೈತರೂ ಸಹ ಸರ್ಕಾರದ ಈ ತಂತ್ರಗಾರಿಕೆಯನ್ನು ಶಾಂತಚಿತ್ತದಿಂದ ಪರಿಶೀಲಿಸಿ, ಸರ್ಕಾರದಿಂದಲೇ ತಮಗೆ ಸಬ್ಸಿಡಿ ನೀಡಬೇಕೆಂದು ಒತ್ತಾಯಿಸಬೇಕು. ಅದಕ್ಕೆ ರಾಜ್ಯದ ಜನಸಾಮಾನ್ಯರು ಹಾಲು ಉತ್ಪಾದಿಸುವ ರೈತರ ಬೆಂಬಲಕ್ಕಿರಲಿದ್ದು, ರೈತರು ಅಂತಹ ನಿಲವು ತಳೆಯಬೇಕೆಂದು ಮನವಿ ಮಾಡಿದೆ.
ಆದ್ದರಿಂದ ರಾಜ್ಯ ಸರ್ಕಾರವು ಹಾಲಿನ ದರ ಈ ಕೂಡಲೇ ಇಳಿಸಬೇಕು. ರೈತರಿಗೆ ಸರ್ಕಾರದಿಂದಲೇ ಸಬ್ಸಿಡಿ ನೀಡಬೇಕೆಂದು ಎಸ್ಯುಸಿಐ (ಸಿ) ಒತ್ತಾಯಿಸಿದೆ ಎಂದು ಸಂಚಾಲಕ ಕೆ.ಸೋಮಶೇಖರ ತಿಳಿಸಿದ್ದಾರೆ.