ಶಹಾಪುರ: ಆಶ್ರಯ ಕಾಲುನಿಗೆ ಮೂಲ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರದ ಇಂಟೆಗ್ರೇಟೆಡ್ ಹೌಸಿಂಗ್ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಇದರ ಪ್ರಯೋಜನ ಪಡೆದು ಪಟ್ಟಣದಲ್ಲಿರುವ ಆಶ್ರಯ ಕಾಲನಿಗೆ ಎಲ್ಲ ರೀತಿಯ ಸೌಕರ್ಯ ನೀಡಲು ಪ್ರಯತ್ನಿಸುವುದಾಗಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಪಟ್ಟಣದ ಬಸ್ ಡಿಪೋ ಹಿಂದಿರುವ ಹೊಸ ಆಶ್ರಯ ಕಾಲನಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಈಗಾಗಲೇ ವಿವಿಧ ಸಮುದಾಯಗಳ 507 ಜನರಿಗೆ ನಿವೇಶನ ನೀಡಿದ್ದು, ಇನ್ನು ಕೆಲವು ಜನರಿಗೆ ನಿವೇಶನ ಹಂಚುವುದು ಬಾಕಿ ಇದೆ. ಸಕಾಲದಲ್ಲಿ ಅದನ್ನು ಪೂರೈಸುವುದರೊಂದಿಗೆ ರಸ್ತೆ, ಕುಡಿವ ನೀರು, ವಿದ್ಯುತ್ ಸೌಕರ್ಯ, ಚರಂಡಿ ಕಾಮಗಾರಿಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಂತ ಹಂತವಾಗಿ ಕಾಮಗಾರಿಗಳು ನಡೆದಿವೆ ಎಂದರು.
ಪುರಸಭೆ ಅಧ್ಯಕ್ಷ ಸಣ್ಣ ನಿಂಗಣ್ಣಾ ನಾಯ್ಕೋಡಿ, ಉಪಾಧ್ಯಕ್ಷ ಗೋಪಾಲ ಸುರಪುರ, ಸದಸ್ಯರಾದ ಖುರ್ಷಿದ್, ಖಾದ್ರಿ, ಹೈಯಾಳಪ್ಪ, ಸುರೇಶ ದೇಸಾಯಿ. ರಹಮತ್ ಗೂಗಡ, ಹಿರಿಯ ಮುಖಂಡರಾದ ಸುರೇಂದ್ರ ಪಾಟೀಲ ಮಡ್ನಾಳ, ಬಸವರಾಜ ಹೇರುಂಡಿ, ರುದ್ರಣ್ಣಾ ಚಟ್ರಿಕಿ, ಗುಂಡಪ್ಪ ತುಂಬಗಿ, ಮುಖ್ಯಾಧಿಕಾರಿ ಸರೋಜಾ ಪಾಟೀಲ, ಬಾಬುಗೋಡಿಹಾಳ, ಶಿಶುಅಭಿವೃದ್ಧಿ ಯೋಜನೆಯ ಹಾಜರಾಬಿ, ಸಮನ್ವಯಾಧಿಕಾರಿ ಶಶಿಕಾಂತ, ಬಸವರಾಜ ಯಾಳಗಿ, ವಿ.ಬಿ.ಜೋಶಿ ಇದ್ದರು.