ಗುಲ್ಬರ್ಗ: ಸರ್ಕಾರಿ ದವಾಖಾನೆಗಳಲ್ಲಿ ಡಾಕ್ಟರ್ಗಳೇ ಇಲ್ಲದ್ದರಿಂದ ಗುಲ್ಬರ್ಗ-ಯಾದಗಿರಿ ಜಿಲ್ಲೆಗಳ ಹಳ್ಳಿಗಾಡಿನ ಜನತೆಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ.
ಉಭಯ ಜಿಲ್ಲೆಗಳಲ್ಲಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಬರ ಕಾಡುತ್ತಿದೆ. ಈ ಬೆಳವಣಿಗೆ ನೇರವಾಗಿ ಹಳ್ಳಿ ಜನರನ್ನು ಹೈರಾಣ ಮಾಡಲಾರಂಭಿಸಿದೆ.
ಜ್ವರ, ಕೆಮ್ಮು ಬಂದರೆ ತಮ್ಮೂರಲ್ಲಿನ ದವಾಖಾನೆ ಇದ್ದರೂ ತಾಲೂಕು ಕೇಂದ್ರ, ಜಿಲ್ಲಾಕೇಂದ್ರಗಳತ್ತ ಹೆಜ್ಜೆ ಹಾಕುವ ಮೂಲಕ ಖಾಸಗಿಯಾಗಿ ದುಪ್ಪಟ್ಟು ಹಣ ತೆತ್ತು ಚಿಕಿತ್ಸೆ ಪಡೆಯುವುದು ಇವರಿಗೆ ಅನಿವಾರ್ಯವಾಗಿದೆ.
ಸಾರಿಗೆ ಸೌಲಭ್ಯ ಅಷ್ಟಕ್ಕಷ್ಟೆ: ಹೋಬಳಿ, ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರ ಗುಲ್ಬರ್ಗಕ್ಕೆ ಇಂದಿಗೂ ರಸ್ತೆ ಸಂಪರ್ಕ ಅಷ್ಟಕ್ಕಷ್ಟೆ. ಆಳಂದ, ಸೇಡಂ, ಜೇವರ್ಗಿ ಹೊರತುಪಡಿಸಿದಲ್ಲಿ ಚಿಂಚೋಳಿ, ಅಫಜಲ್ಪುರ, ಆಳಂದ, ಗುಲ್ಬರ್ಗದಂತಹ ತಾಲೂಕುಗಳಲ್ಲಿ ಜಿಲ್ಲೆ- ತಾಲೂಕು ಸಂಪರ್ಕ ಮಾಡುವಲ್ಲಿ ರಸ್ತೆಗಳು ಇಂದಿಗೂ ಪ್ರಮುಖ ಪಾತ್ರ ನಿರ್ವಹಿಸುತ್ತಿಲ್ಲ.
ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಹಳ್ಳಿ ಮಂದಿ ತಮ್ಮೂರ ದವಾಖಾನೆಗಳ ಭಣಗುಟ್ಟುವಿಕೆಯಿಂದಾಗಿ ವಾಹನ ಹತ್ತಿಯೋ, ಇನ್ಯಾವ ಮಾರ್ಗವಾಗಿಯೋ ಪ್ಯಾಟಿ(ತಾಲೂಕು)ಗೆ ಹೋಗಲೇಬೇಕು. ಅಲ್ಪ ಉದಾಸೀನತೆಯೂ ಈ ಹಂತದಲ್ಲಿ ಹಳ್ಳಿಗರ ಪ್ರಾಣಕ್ಕೆ ಕಂಟಕಪ್ರಾಯವಾಗುತ್ತಿದೆ.
ಭಣಗುಡುತ್ತಿವೆ ದವಾಖಾನೆಗಳು: ಜನಸಾಮಾನ್ಯರಿಗೂ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳು ಒದಗಲಿ ಎಂಬ ಉದ್ದೇಶದೊಂದಿಗೆ ಗುಲ್ಬರ್ಗ-ಯಾದಗಿರಿ ಜಿಲ್ಲೆಗಳಲ್ಲಿ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರ ಮಂಜೂರೇನೋ ಮಾಡಿದೆ. ಆದರೆ ಈ ದವಾಖಾನೆಗಳಲ್ಲಿ ಮಂಜೂರಾತಿಗೆ ತಕ್ಕಂತೆ, ಆಯಾ ಸಂಸ್ಥೆಗಳ ವ್ಯಾಪ್ತಿ- ವಿಸ್ತಾರ ಆಧರಿಸಿ ವೈದ್ಯರೇ ಇಲ್ಲ.
ಈ ಬೆಳವಣಿಗೆಯಿಂದಾಗಿ ಉಭಯ ಜಿಲ್ಲೆಗಳ ಆಸ್ಪತ್ರೆಗಳು ವೈದ್ಯರ ಕೊರತೆಯಿಂದಾಗಿ ದೇವರಿಲ್ಲದ ಗುಡಿಯಂತಾಗಿವೆ. ಇದರ ಕೆಟ್ಟ ಪರಿಣಾಮ ಜನಾರೋಗ್ಯದ ಮೇಲಾಗುತ್ತಿದೆ. ಅಷ್ಟೇ ಅಲ್ಲ, ಬಡ ಜನತೆ ಆರೋಗ್ಯ ಸೇವೆ ಹೊಂದಲೂ ಕಷ್ಟ ಎದುರಿಸುವಂತಾಗಿರುವುದು ದುರಂತ.
ಆತಂಕದ ಸಂಗತಿ: ಉಭಯ ಜಿಲ್ಲೆಗಳಲ್ಲಿ ವೈದ್ಯರ ಹುದ್ದೆಗಳು ಭಣಗುಡುತ್ತಿರುವ ಸಂಗತಿ ಆತಂಕಕಾರಿ. ಏಕೆಂದರೆ ಆರೋಗ್ಯ ಕಾಪಾಡುವ ವೈದ್ಯರೇ ಇಲ್ಲಿಲ್ಲ ಅಂದ ಮೇಲೆ ಆ ಪ್ರದೇಶದ ಸರ್ವತೋಮುಖ ಪ್ರಗತಿಗೆ ಅದರಿಂದಾಗುವ ಪೆಟ್ಟು ಅಧಿಕ.
'ತುಸು ಏನಾರ ಆರಾಮ ತಪ್ಪಿದ್ರೂ ಸೊಲ್ಲಾಪುರ, ಪುಣೆ, ಮೀರಜ್ ಅಂತ ಹೋಗೋದೇ ಆಗ್ಯದ. ದಾಮ ದುಪ್ಪಟ್ಟ ದುಡ್ಡ ಖರ್ಚಾಗ್ತದ. ಇಲ್ಲಿನ ದವಾಖಾನಿಗೋಳು ಇದ್ದು ಇಲ್ಲದಂಗ, ಹಳ್ಳಿ ಮಂದಿ ಹೈರಾಣ ಹೆಚ್ಯದ' ಎಂಬುದು ಹಳ್ಳಿ ನಿವಾಸಿಗಳ ಅಭಿಪ್ರಾಯವಾಗಿದೆ.
ತಜ್ಞ ವೈದ್ಯರು ಸಿಗುತ್ತಿಲ್ಲ: ಖಾಲಿ ಹುದ್ದೆಗಳಲ್ಲಿ ತಜ್ಞ ವೈದ್ಯರದ್ದೇ ಸಿಂಹಪಾಲು. ಇವರಿಗೆ ಗೌರವ ಧನವೂ ಅತೀ ಹೆಚ್ಚು ಕೊಡಲು ಮುಂದೆ ಬಂದರೂ ಯಾವ ವೈದ್ಯರೇ ಲಭ್ಯವಾಗುತ್ತಿಲ್ಲ ಎಂಬುದು ಸರ್ಕಾರದ ಅಳಲು. ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಸ್ತ್ರೀರೋಗ, ಮಕ್ಕಳ ತಜ್ಞರು, ಅರವಳಿಕೆ ತಜ್ಞರ ನೇಮಕಕ್ಕೆ ಆಕರ್ಷಕ ವೇತನ ನೀತಿ ಜಾರಿಗೆ ತಂದರೂ ಯಾರೂ ವೈದ್ಯರೂ ಹಳ್ಳಿಗಾಡಿನ ಜನತೆಗೆ ಸೇವೆ ಕೊಡುವಂತಹ ಕಾಳಜಿ, ಕಕ್ಕುಲಾತಿ ಧೋರಣೆ ಪ್ರದರ್ಶಿಸುತ್ತಿಲ್ಲ ಎಂಬುದು ಇನ್ನೂ ಹೆಚ್ಚಿನ ಆತಂಕ ಮೂಡಿಸಿದೆ.
ಸರ್ಕಾರದ ಗಮನದಲ್ಲಿದೆ: ಗುಲ್ಬರ್ಗ-ಯಾದಗಿರಿ ಜಿಲ್ಲೆಗಳನ್ನು ಕಾಡುತ್ತಿರುವ ವೈದ್ಯರ ಬರಗಾಲದ ಸಂಗತಿ ಸರ್ಕಾರದ ಗಮನಕ್ಕಿದೆ ಎಂಬುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳ ಅಭಿಮತ. ಸರ್ಕಾರಕ್ಕೆ ಈ ಭಣಗುಡುತ್ತಿರುವ ಪರಿಸ್ಥಿತಿಯ ವರದಿ ರವಾನಿಸಿ ಅಗತ್ಯ ಕ್ರಮಕ್ಕೆ ಕೋರಿದ್ದರೂ ಅಲ್ಲಿಂದ ಸೂಕ್ತ ಸಂಭಾವನೆ ದೊರಕಿಲ್ಲ ಎಂಬ ಮಾತುಗಳು ಇಲಾಖೆಯಿಂದಲೇ ಕೇಳಿಬರುತ್ತಿವೆ. ಹೀಗಾಗಿ ಉಭಯ ಜಿಲ್ಲೆಗಳ ವೈದ್ಯರ ಕೊರತೆಗೆ ಅದ್ಯಾವಾಗ ಪರಿಹಾರ ದೊರಕುವುದೋ ಎಂದು ಜನತೆ ಎದುರು ನೋಡುವಂತಾಗಿದೆ.
-ಶೇಷಮೂರ್ತಿ ಅವಧಾನಿ