ಚಿತ್ತಾಪುರ: ಇಲ್ಲಿನ ವಿಠಲ್ ಮಂದಿರದಲ್ಲಿ ಪ್ರೇಮಿಗಳ ದಿನವನ್ನು ವಿರೋಧಿಸಿ ಪರ್ಯಾಯವಾಗಿ ಮಾತಾ ಪಿತೃಗಳ ಪೂಜೆ ಆಚರಿಸಲಾಯಿತು. ಆಸಾರಾಮ ಬಾಪೂಜಿ ಸತ್ಸಂಗ್ ಸಮಿತಿವತಿಯಿಂದ ತಂದೆ, ತಾಯಿಗಳಿಗೆ ಮಕ್ಕಳಿಂದ ಪೂಜೆ ಮಾಡುವ ಮೂಲಕ ಮಾತಾ- ಪಿತೃಗಳ ಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ಮಾಡಲಾಯಿತು.
ಸಮಿತಿ ಸದಸ್ಯ ವೀರಣ್ಣ ಶಿಲ್ಪಿ, ರಾಮಕೃಷ್ಣ ಸುರೇ ಅವರು ಆಸಾರಾಮ ಬಾಪೂಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಪ್ರೇಮಿಗಳ ದಿನ ಆಚರಿಸುವುದರಿಂದ ಯುವಕರ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇದನ್ನು ವಿರೋಧಿಸಿ ಭಾರತ ದೇಶದ ಸಂಸ್ಕೃತಿಯನ್ನು ಉಳಿಸಲು ಶುದ್ಧವಾದ ವಾತಾವರಣ ನಿರ್ಮಿಸಲು ತಂದೆ, ತಾಯಿಗಳ ಪೂಜೆ ಮಾಡಬೇಕು. ಪ್ರತಿ ವರ್ಷ ಈ ದಿನದಂದು ತಂದೆ, ತಾಯಿಗಳ ಪೂಜೆ ಮಾಡುವ ಪರಿಪಾಠ ಮಾಡಿಕೊಳ್ಳಬೇಕೆಂದು ಹೇಳಿದರು. ಸಮಾರಂಭದಲ್ಲಿ 15 ದಂಪತಿಗಳಿಗೆ ಅವರವರ ಮಕ್ಕಳು ಪಾದ ಪೂಜೆ ಮಾಡಿ ಸಂಭ್ರಮಿಸಿದರು. ಸದಸ್ಯರಾದ ನಾಗನಾಥ ಚುವಾ, ಅಂಬಾದಾಸ ಬುರುಬುರೆ, ಬಸವರಾಜ ಜಾನಕರ, ವಿಶ್ವರಾಜ ಜಗನ್ನಾಥ, ಬಲಭೀಮ ಕಾಮಜಿ, ಶಂಕರರಾವ ಲೋಮಟೆ, ಶಿವಾಜಿ ಕ್ಷೀರಸಾಗರ ಉಪಸ್ಥಿತರಿದ್ದರು. ಸಾಧನಾ ಶಿಲ್ಪಿ ನಿರೂಪಿಸಿದರು.