ಯಾದಗಿರಿ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಸಮುದಾಯವೆಂದರೆ ಬಂಜಾರ ಸಮುದಾಯ. ಸಮಾಜದ ಜನತೆ ಅಭಿವೃದ್ಧಿ ಹೊಂದಬೇಕಾದಲ್ಲಿ ಶಿಕ್ಷಣ ಅವಶ್ಯವಾಗಿದ್ದು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಮುದಾಯ ಒಗ್ಗಟ್ಟಾಗಬೇಕೆಂದು ಜಿಪಂ ಸದಸ್ಯ ದೇವರಾಜ ನಾಯಕ ಕರೆ ನೀಡಿದರು. ತಾಲೂಕಿನ ಆಶನಾಳ ತಾಂಡಾದಲ್ಲಿ ಸಂತ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಆಗ ಸಮಾಜದ ಅಭಿವೃದ್ಧಿ ಸಾಧ್ಯವಾಗುವುದು ಎಂದರು. ಸಾನ್ನಿಧ್ಯ ವಹಿಸಿದ್ದ ಬಳೆರಾಮ್ ಮಹಾರಾಜ ಮಾತನಾಡಿ, ಬಂಜಾರ ಸಮುದಾಯದ ಯುವಕರು ಸಮಾಜ ಪರಿವರ್ತನೆಯಲ್ಲಿ ತೊಡಗಬೇಕು. ದುಶ್ಚಟಗಳಿಂದ ದೂರವಿದ್ದು, ಇತರ ಸಮಾಜದ ಜನರೊಂದಿಗೆ ಸಾಮರಸ್ಯದಿಂದ ಇರಬೇಕೆಂದು ಹೇಳಿದರು. ಜಿಪಂ ಸದಸ್ಯ ಬಸವರಾಜ ಖಂಡ್ರೆ ಮಾತನಾಡಿದರು. ಚಂದ್ರ ಮಹಾರಾಜ ಇದ್ದರು. ಸುನೀತಾ ಚವ್ಹಾಣ, ವಿಶ್ವನಾಥ ಬಾಡಿಯಾಳ, ಪರಶುರಾಮ, ಮಲ್ಲಿಕಾರ್ಜುನ, ಬಸವರಾಜ ನಾಯಕ, ಬಾಬು, ಲಕ್ಷ್ಮಣ ನಾಟೇಕಾರ ಇದ್ದರು.
ಕಾಡು ಹಂದಿಗಳ ನಿಯಂತ್ರಣಕ್ಕೆ ಆಗ್ರಹ
ಯಾದಗಿರಿ: ಗಡಿಭಾಗದ ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ತಾಲೂಕಿನ ಯಲ್ಹೇರಿ, ಯಲಸತ್ತಿ, ಕಂದಕೂರ, ಚಿಂತನಹಳ್ಳಿ, ಗುಂಜನೂರ, ಕೊಂಕಲ್, ಧರ್ಮಾಪುರ, ತೊಟ್ಲೂರ್, ಅನಪುರ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಕಾಡು ಹಂದಿಗಳ ಕಾಟದಿಂದ ರೈತರ ಬೆಳೆಗಳಾದ ತೊಗರಿ, ಕರಿ ಕುಸುಬೆ, ಕಬ್ಬು, ಜೋಳ, ಕಡ್ಲೆ, ಶೇಂಗಾ ಬೆಳೆ ನಾಶವಾಗಿವೆ. ಇದರಿಂದ ರೈತರಿಗೆ ಅಪಾರ ನಷ್ಟವಾಗಿದೆ. ಅಲ್ಲದೆ ರಾತ್ರಿ ಸಮಯದಲ್ಲಿ ರೈತರು ತಮ್ಮ ಹೊಲಗಳಿಗೆ ಹೋಗಲು ಕೂಡ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಡಳಿತ ಹಂದಿಗಳ ಕಾಟ ನಿಯಂತ್ರಣಕ್ಕೆ ರೈತರಿಗೆ ಬಂದೂಕಗಳನ್ನು ಪಡೆಯಲು ಪರವಾನಗಿ ನೀಡಬೇಕು. ಅಲ್ಲದೇ ಸಂಬಂಧಪಟ್ಟ ಇಲಾಖೆಗೆ ಹಂದಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ರೈತರಾದ ಹಣಮಂತ ಯಲ್ಹೇರಿ ಇತರರು ಒತ್ತಾಯಿಸಿದ್ದಾರೆ.
ಸಮಾಜ ಅಭಿವೃದ್ಧಿಗೆ ಶಿಕ್ಷಣ ಅಗತ್ಯ: ಎಂವೈಪಿ
ಅಫಜಲ್ಪುರ: ಭೋವಿ ಸಮಾಜದವರು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಮಾಜಿ ಶಾಸಕ ಎಂ.ವೈ. ಪಾಟೀಲ ಹೇಳಿದರು. ಭೋವಿ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿ, ಯಾವುದೇ ಸಮಾಜ ಮುಂದೆ ಬರಬೇಕಾದರೆ ಶಿಕ್ಷಣ ಮತ್ತು ಸಂಘಟನೆ ಬಹಳ ಮುಖ್ಯ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ ಹೆರೂರ ಮಾತನಾಡಿದರು. ಮಳೇಂದ್ರ ಶಿವಾಚಾರ್ಯರು, ಇಮ್ಮಡಿ ಸಿದ್ದರಾಮೇಶ್ವರರಿದ್ದರು.