ಚಿಂಚೋಳಿ: ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಪಟ್ಟಣ ಪಂಚಾಯತ 18 ವಾರ್ಡುಗಳಿಗೆ ಮಾ.7 ಚುನಾವಣೆ ದಿನಾಂಕ ಘೋಷಿಸಿ ಅಧಿಸೂಚನೆ ಹೊರಡಿಸಿದರು ಸಹಾ ಇಲ್ಲಿನ ಪಪಂ ಮಾತ್ರ ಯಾವುದೇ ಚುನಾವಣೆ ನೀತಿ ಸಂಹಿತೆ ಬಗ್ಗೆ ಗಮನಹರಿಸದೇ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ. ಸ್ಥಳೀಯ ಪಪಂ 18 ವಾರ್ಡುಗಳಿಗೆ ಚುನಾವಣೆ ಪ್ರಕ್ರಿಯೆ ಮತ್ತು ನಾಮಪತ್ರ ಸಲ್ಲಿಸುವುದು ಶನಿವಾರ ಫೆ.16ರಿಂದ ಪ್ರಾರಂಭಗೊಂಡಿದೆ. ಆದರೆ ಪಟ್ಟಣದ ರಸ್ತೆ ಮಧ್ಯೆಭಾಗದಲ್ಲಿ ಹಾಕಿರುವ ವಿವಿಧ ರಾಜಕೀಯ ಪಕ್ಷಗಳ ಕಟೌಟ್, ಬ್ಯಾನರ್ಸ್ ಮತ್ತು ಪಕ್ಷದ ಚಿನ್ಹೆವುಳ್ಳ ಬಿತ್ತಿ ಪತ್ರಗಳು ಅಲ್ಲಲ್ಲಿ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಚಂದಾಪುರ ಮಹಾತ್ಮ ಗಾಂಧಿ ವೃತ್ತದವರಿಗೆ ಅಲ್ಲಲ್ಲಿ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಬ್ಯಾನರ್ಗಳು ರಾರಾಜಿಸುತ್ತಿದ್ದರು, ಇಲ್ಲಿನ ಪಪಂ ಮುಖ್ಯಾಧಿಕಾರಿಗಳು ಇವುಗಳನ್ನು ತೆಗೆದು ಹಾಕದೇ ನಿರ್ಲಕ್ಷ್ಯತನ ತೋರಿಸಿದ್ದಾರೆಂದು ರಾಜಕೀಯ ಪಕ್ಷಗಳ ಮುಖಂಡರು ದೂರುತ್ತಾರೆ. ಪಪಂ ವತಿಯಿಂದ ಯಾವುದೇ ಪರವಾನಗಿ ಶುಲ್ಕ ಭರಿಸದೇ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಕನಕದಾಸರ ವೃತ್ತಗಳಲ್ಲಿ ಬ್ಯಾನರ್ಗಳು ಹಾಕಲಾಗಿದೆ. ಚಂದಾಪುರ ನಗರದ ಅನೇಕ ಬಡಾವಣೆಗಳಲ್ಲಿ ಮತ್ತು ಪಟ್ಟಣದ ಹರಿಜನವಾಡ್, ಧನಗರ ಗಲ್ಲಿ, ಮೋಮಿನಪುರ, ಬ್ರಾಹ್ಮಣ ಗಲ್ಲಿ, ಜ್ಯೋಶಿ ಗಲ್ಲಿ, ಬಡಿ ದರ್ಗಾ, ಛೋಟಿ ದರ್ಗಾ, ಮದರಸಾಬ ದರ್ಗಾ, ತರಕಾರಿ ಮಾರ್ಕೆಟ್, ಚಂದಾಪುರ ಬಸವ ನಗರ, ಆಶ್ರಯ ಕಾಲೋನಿ, ಗಂಗು ನಾಯಕ ತಾಂಡ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ಗಳು ಹಾರಾಡುತ್ತಿವೆ. ಇದರ ಬಗ್ಗೆ ಪಪಂ ಚುನಾವಣಾಧಿಕಾರಿಗಳು ಮತ್ತು ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಆಗ್ರಹವಾಗಿದೆ.