ಸುದ್ದಿ ಸಂಕ್ಷೇಪ

Updated on: 

ಲಾಡ್ಲೆ ಮಶಾಕರ ಗಂಧದ ಮೆರವಣಿಗೆ
ಆಳಂದ: ಸೂಫಿ ಸಂತ ಹಜರತ್ ಲಾಡ್ಲೆ ಮಶಾಕ ಅವರ ಉರುಸ್ ನಿಮಿತ್ತ ಇತ್ತೀಚೆಗೆ ಸಂಭ್ರಮ, ಸಡಗರದ ಮಧ್ಯ ಗಂಧದ(ಸಂದಲ) ಭವ್ಯ ಮೆರವಣಿಗೆ ನಡೆಯಿತು. ವಾಡಿಕೆಯಂತೆ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಗಂಧವನ್ನು ಪೂಜಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಂದೇ ಸಂಜೆ 7ಕ್ಕೆ ಪಟ್ಟಣದ ಮೆರವಣಿಗೆ ಹೊರಟು ಬೆಳಗಿನವರೆಗೆ ದರ್ಗಾಕ್ಕೆ ತಲುಪಿತು. ಫೆ. 21ರಂದು ದೀಪೋತ್ಸವ, ಮಧ್ಯಾಹ್ನ ಖುರಾನ್ ಪಠಣ, ನಂತರ ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಮುಂಬೈ, ಹೈದರಾಬಾದ್‌ನಿಂದ ಕವಾಲಿ ತಂಡಗಳಿಂದ ರಾತ್ರಿ 8ಕ್ಕೆ ಆಯೋಜಿಸಲಾಗಿತ್ತು. 23ರಂದು ಪ್ರಸಾದ ವಿತರಣೆ, 25ಕ್ಕೆ ಖುದುಬೇ ದಖನ್, ನಡೆಯಲಿದೆ. ವಿವಿಧ ಕಡೆಗಳಿಂದ ಮೌಲಾನಗಳು ಆಗಮಿಸುವರು. ಫೆ. 25 ರಂದು ಉರುಸ್ ಸಮಾರೋಪಗೊಳ್ಳಲಿದೆ. ಮೆರವಣಿಗೆಯಲ್ಲಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಸಾರ್ವಜನಿಕರು ಮತ್ತು ದರ್ಗಾ ಕಮಿಟಿ ಅಧ್ಯಕ್ಷ ಅಫಜಲ್ ಅನ್ಸಾರಿ, ಮಾಜಿ ಅಧ್ಯಕ್ಷ ಇಸೂಫ್ ಅನ್ಸಾರಿ ರಮು, ಉಪಾಧ್ಯಕ್ಷ ಮೋಹಿಜ್ ಕರಬಾರಿ, ಮುಖಂಡ ಮೌಲಾ ಮುಲ್ಲಾ, ಸಾಧತ್ ಅನ್ಸಾರಿ, ಸೈಫನ್ ಮಲಕ್ ಅನ್ಸಾರಿ, ಅಹೆಮದ್ ಅನ್ಸಾರಿ, ಹಮ್ಮಿದ್ ಅನ್ಸಾರಿ, ಫರಧೋಸ್ ಅನ್ಸಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಾಳೆಯಿಂದ ಸಾಮೂಹಿಕ ಕ್ರೀಡೆ
ಗುಲ್ಬರ್ಗ: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಫೆಬ್ರುವರಿ 25ರಿಂದ 28ರವರೆಗೆ ಗುಲ್ಬರ್ಗ ಹಾಗೂ ಚಿತ್ತಾಪುರಗಳಲ್ಲಿ ಸಾಮೂಹಿಕ ಕ್ರೀಡೆಗಳು ಜರುಗಲಿವೆ. ಯುವಕರು-ಯುವತಿಯರು, ಬಾಲಕರು-ಬಾಲಕಿಯರು ಈ ಕ್ರೀಡೆಗಳಲ್ಲಿ ಭಾಗವಹಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವ ಉದ್ದೇಶದಿಂದ ಸಾಮೂಹಿಕ ಕ್ರೀಡೆಗಳನ್ನು ಸಂಘಟಿಸಲಾಗಿದೆ. ಹಾಪಿಂಗ್ ರೇಸ್, ಮೂರು ಕಾಲಿನ ಓಟ, ಸಾಮೂಹಿಕ ಓಟ, ಮ್ಯೂಜಿಕಲ್ ಚೇರ್ ಮತ್ತು ಸ್ಲೋ ಸೈಕಲ್ ಓಟ ಕ್ರೀಡೆಗಳು ನಡೆಯುತ್ತಿವೆ. ಸ್ಥಳ ದಿನಾಂಕ ಹಾಗೂ ಸಮಯ ಇಂತಿದೆ. ಫೆ.25ರಂದು ಮಧ್ಯಾಹ್ನ 2ಕ್ಕೆ ದಂಡೋತಿ ಸರ್ಕಾರಿ ಪ್ರೌಢಶಾಲೆಯಲ್ಲಿ, ಸರ್ಕಾರಿ ಪ್ರೌಢಶಾಲೆ ಮಾಡಬೋಲದಲ್ಲಿ ಬೆಳಗ್ಗೆ 10.30ಕ್ಕೆ ಮತ್ತು ಫೆ.28ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಫೆ.26ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರಿ ಪ್ರೌಢಶಾಲೆ ಕಾವಳಗಾ (ಬಿ), ಫೆ.27ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಪ್ರೌಢಶಾಲೆ ಹರಸೂರ, ಹಾಗೂ ಫೆ.28ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಪ್ರೌಢಶಾಲೆ ಮರಗುತ್ತಿಯಲ್ಲಿ ನಡೆಯಲಿವೆ. ವಿವರಕ್ಕೆ ನಾಗರಾಜ ಮೊ. 93435 24331ನ್ನು ಸಂಪರ್ಕಿಸಬೇಕು.
ಮನೆಗೆ ಕನ್ನ
ಗುಲ್ಬರ್ಗ: ಆಳಂದ ತಾಲೂಕಿನ ಮಾದನಹಿಪ್ಪರ್ಗಾದಲ್ಲಿ ಫೆ. 22ರ ಶುಕ್ರವಾರ ಸಂಜೆ 5 ಗಂಟೆ ಹೊತ್ತಿಗೆ ಪಾರ್ವತಿ ಶರಣಪ್ಪ ಇವರ ಮನೆಯ ಬೀಗ ಮುರಿದು ನುಗ್ಗಿರುವ ಕಳ್ಳರು ಅಲ್ಲಿಂದ 24 ಸಾವಿರ ಮೌಲ್ಯದ ಚಿನ್ನಾಭರಣ, ನಗದು ಹಣ ದೋಚಿದ್ದಾರೆ. ಮಾದನಹಿಪ್ಪರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com