ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ನಾನು ಇಂತಹ ಸಮಾಜ, ಸಂಘಟನೆ ಅಧ್ಯಕ್ಷ. ಇದೂ ಸಹ ಸಮಾಜ ಸೇವೆ, ಈ ಸಾರಿ ಗೌಡಾಕ್ಕೆ ನನಗೂ ಪರಿಗಣಿಸಿ ಪ್ಲೀಸ್...
ಮಠಾಧೀಶರಾಗಿದ್ದೀವಿ, ಇಷ್ಟೆಲ್ಲ ಭಕ್ತರಿದ್ದಾರ, ಇಂತಿಥವರಿಗೆ ಕರ್ದು ಸನ್ಮಾನ, ಸತ್ಕಾರ ಮಾಡೀವಿ. ನಮ್ಗೂ ಈ ಬಾರಿ ಗೌರವ ಡಾಕ್ಟರೇಟ್ ಕೊಡ್ರಿ...
ನೀವು ಈಗಾಗ್ಲೇ ಕೊಟ್ಟವರಿಗಿಂತ ನಾವೇನ್ ಕಮ್ಮಿ ಇದ್ದೀವ್ರಿ, ನಮಗೂ ಗೌಡಾ ಯಾಕ ಕೋಡಬಾರ್ದು ಹೇಳ್ರಿ... ನಮ್ದು ಅರ್ಜಿ ತಗೊಳ್ರಿ, ಗೌಡಾ ಪದವಿಗಾಗಿ ಇನ್ನೇನ್ ಮಾಡಬೇಕು ಹೇಳ್ರಿ..
- ಗೌರವ ಡಾಕ್ಟರೇಟ್ ಸುತ್ತ ಜ್ಞಾನಗಂಗೆ ಅಂಗಳದಲ್ಲಿ ಕಳೆದ 15 ದಿನಗಳಿಂದ ಕಾಣುತ್ತಿರುವ ವಿದ್ಯಮಾನಗಳಿವು. ಸಿಕ್ಕವರಿಗೆ ಸೀರುಂಡೆಯಂತೆ ಮಾನದಂಡವಿಲ್ಲದೆ ಸ್ವಾರ್ಥ, ಸ್ವಜನ ಪಕ್ಷಪಾತ, ಜಾತಿ-ಮತ, ಕೋಮುಗಳ ಹಿನ್ನೆಲೆಯಲ್ಲೇ ಗೌಡಾ ನೀಡುವ ಕೆಟ್ಟ ಸಂಪ್ರದಾಯ ಹಾಕಿರುವ ಜ್ಞಾನಗಂಗೆ ಈ ಬಾರಿ ಸ್ವಯಂಕೃತ ಅಪರಾಧ ಎಂಬಂತೆ ಅಕ್ಷರಶಃ ಫಜೀತಿಗೆ ಒಳಗಾಗಿದೆ.
ಘಟಿಕೋತ್ಸವ ಮುಹೂರ್ತ(ಮಾ.6) ಸಮೀಪಿಸುತ್ತಿದ್ದಂತೆಯೇ ಗೌಡಾ ಆಕಾಂಕ್ಷಿಗಳ ಸಂಖ್ಯೆ ಹಿಗ್ಗುತ್ತ ಸಾಗಿದೆ. ಆಕಾಂಕ್ಷಿಗಳು ಸಿಂಡಿಕೇಟ್ ಸದಸ್ಯರ ಮನೆಬಾಗಿಲೂ ತಟ್ಟುತ್ತಿದ್ದಾರೆ. ಮೂಲಗಳ ಪ್ರಕಾರ ಗೌಡಾಕ್ಕಾಗಿ ಹೈ- ಕ, ರಾಜ್ಯದ ಎಲ್ಲೆಡೆಯಿಂದ ಮಠಾಧೀಶರಿಂದಲೇ 50ಕ್ಕೂ ಹೆಚ್ಚು ಅರ್ಜಿಗಳು ಬಂದಿವೆಯಂತೆ!
ದಬಾವ್- ವಶೀಲಿ- ಗ್ರೇಟ್ ಡೀಲ್: 31ನೇ ಘಟಿಕೋತ್ಸವದಲ್ಲಿ ಇಂತಹ ಮಠಾಧೀಶರಿಗೆ ಯಾವ ಕಾರಣಕ್ಕೂ ಗೌಡಾ ಕೈತಪ್ಪಬಾರದು. ಈ ಷರತ್ತು ಓಕೆ ಎಂದರೆ ನಿಮ್ನನ್ನು ವಿವಿ ಉನ್ನತಾಧಿಕಾರ ಕುರ್ಚಿಗೆ ತರುತ್ತೇವೆ.. ಇಂತಹ ಸಂವಾದಗಳು, ಷರತ್ತುಬದ್ಧ ನೇಮಕಾತಿಗಳು ನಡೆದಿರುವ ಅಚ್ಚರಿಯ ಮಾಹಿತಿಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ.
ಹೆಸರು ಹೇಳಲಿಚ್ಛಿಸದ ಸಿಂಡಿಕೇಟ್ ಸದಸ್ಯರೊಬ್ಬರು ಗೌಡಾ ಸುತ್ತಲಿನ ಬೆಳವಣಿಗೆ ಬಗ್ಗೆ ಮಾತನಾಡಿ, ಆಡಳಿತಾರೂಢ ಪಕ್ಷದಲ್ಲಿರುವ ಗುಲ್ಬರ್ಗದ ಹಿರಿಯ ರಾಜಕಾರಣಿಗಳಿಬ್ಬರು ತಮಗೆ ಬೇಕಾದ ಮಠಾಧೀಶರಿಗೇ ಗೌಡಾ ದಕ್ಕುವಂತೆ ಅದಾಗಲೇ ಷರತ್ತುಬದ್ಧ ವಿವಿ ನೇಮಕಾತಿಗಳನ್ನೂ ಮಾಡಿದ್ದಾರೆ ಎಂಬ ಸಂಗತಿ ಬಾಯಿಬಿಟ್ಟಿದ್ದಾರೆ. ಈಚೆಗೆ ಅಂತಹ ನೇಮಕಾತಿಗಳೂ ವಿವಿ ಅಂಗಳದಲ್ಲಿ ಆಗಿದ್ದು ಇತಿಹಾಸ.
ಕುಲಪತಿಗೇ ಗೌಡಾ ಆಯ್ಕೆ ಪಟ್ಟಿ ಅಂತಿಮಗೊಳಿಸುವ ಅಧಿಕಾರ ನೀಡಿದ್ದ ಸಿಂಡಿಕೇಟ್ ಸದಸ್ಯರು ಕಳೆದೆರಡು ವರ್ಷ ಅಂತಿಮಗೊಂಡ ಯಾದಿ ಕಂಡು ಹೌಹಾರಿದ್ದೂ ಇದೆ. ವಿಜ್ಞಾನಿಗೆ ಗೌಡಾ ಕೊಡೋಣ, ನಾನೇ ಹೆಸರು ಕೊಡ್ತೀನಿ ಅಂತ ಹೇಳಿದ್ದ ಕುಲಪತಿಗಳು, ಪಟ್ಟಿಯಲ್ಲಿ ಸೇರಿಸಿದ್ದ ಹೆಸರು ಕೇಂದ್ರ ಸರ್ಕಾರದ ಉದ್ಯೋಗಿಯದ್ದು ಎಂಬುದನ್ನರಿತಾಗ ತಲೆ ತಗ್ಗಿಸುವಂತಾಯ್ತು ಎಂದು ಇನ್ನೊಬ್ಬ ಸಿಂಡಿಕೇಟ್ ಸದಸ್ಯರು ಗೌಡಾ ಆಯ್ಕೆಯಲ್ಲಿನ ಯಡವಟ್ಟನ್ನು 'ಕನ್ನಡಪ್ರಭ'ಕ್ಕೆ ಹೇಳಿದರು.
ಅಧಿಕಾರಿಗೆ, ಅಧಿಕಾರದಲ್ಲಿರುವ ಮಂತ್ರಿಗಳೇ ಯಾಕ್ರಿ ಈ ಗೌರವ ಎಂದು ಪ್ರಶ್ನಿಸಿದ್ದಕ್ಕೇ ಜಾತಿ ಚರ್ಚೆಗೆ ತಂದು ಹಾಗೆ ಪ್ರಶ್ನಿಸಿದಂತಹ ಸಿಂಡಿಕೇಟ್ ಸದಸ್ಯರನ್ನೇ ಸರ್ಚ್ ಕಮಿಟಿಯಿಂದ ದೂರ ಇರಿಸಿ ಬಾಯಿ ಮುಚ್ಚುವಂತೆ ಮಾಡಲಾಯ್ತಂತೆ!
ಘಟಿಕೋತ್ಸವದಿಂದ ದೂರ ದೂರ..: ಮಠಾಧೀಶರಿಗೆ ಗೌಡಾ ಬೇಡ ಎಂದರೂ ಕುಲಪತಿಗಳೇ ಮಧ್ಯಸ್ಥಿಕೆ ವಹಿಸಿ ಅದನ್ನು ನೀಡಿದಾಗ ಸಂವೇದನಾಶೀಲ ಸಿಂಡಿಕೇಟ್ ಸದಸ್ಯರು ಇನ್ನೇನು ಮಾಡಲು ಸಾಧ್ಯ? ಆಗಿರುವ ಅಪಮಾನ, ತಮ್ಮ ಮಾತಿಗೆ ಬೆಲೆಯೇ ಇಲ್ಲ ಎಂಬುದನ್ನರಿತು ವಿವಿ ಘಟಿಕೋತ್ಸವದಿಂದಲೇ ದೂರ ಉಳಿದ್ದಾರೆ. ಇಷ್ಟಾದರೂ ಗೌಡಾ ಬೇಕಾಬಿಟ್ಟಿ ಹಂಚಿಕೆ ನಿಂತಿಲ್ಲ ಎಂಬುದೇ ಅವರನ್ನು ಕಾಡುತ್ತಿರುವ ಕೊರಗು.
ನೀತಿ ಸಂಹಿತೆ ಆತಂಕ: ಮಾ.6 ಘಟಿಕೋತ್ಸವ, ಮಾ.7 ಸ್ಥಳೀಯ ಸಂಸ್ಥೆ ಚುನಾವಣೆ. ಹೀಗಾಗಿ ಈ ಬಾರಿ ವಿವಿ ತನ್ನ ಅಧಿಕಾರದಲ್ಲಿರುವ ಮಂತ್ರಿಗಳಿಗೆ, ಮಾಜಿಗಳಿಗೆ, ರಾಜಕೀಯ ಸಂಬಂಧಗಳಿರುವವರಿಗೆ ಗೌಡಾ ನೀಡುವ ತನ್ನ ಹಳೆಯ ಚಾಳಿ ಮುಂದುವರಿಸುವಾಗ ಎರಡು ಬಾರಿ ಚಿಂತಿಸುವಂತಾಗಿದೆ. ಇಂತಹ ಸಂಧಿಕಾಲದಲ್ಲಿ ಘಟಿಕೋತ್ಸವ ನಡೆಯುತ್ತಿರುವುದರಿಂದ ಗೌಡಾ ಪ್ರದಾನ ಈ ಬಾರಿ ಕೈಬಿಟ್ಟರೂ ಪರವಾಗಿಲ್ಲ ಎಂಬ ಚರ್ಚೆಗಳೂ ನಡೆದಿವೆ.
ಸಿಂಡಿಕೇಟ್ ಸದಸ್ಯರೇನಂತಾರೆ?
ಚುನಾವಣೆ ಹೊಸ್ತಿಲಲ್ಲೇ ಘಟಿಕೋತ್ಸವ ಇದೆ. ಗೌರವ ಡಾಕಿಟರೇಟ್ ನೀಡುವಾಗ ರಾಜಕೀಯ ಸಂಬಂಧಿಕರ ಹೆಸರು ಆಯ್ಕೆಯಾದರೆ ವಿವಾದ ಖಚಿತ. ವಿಶ್ವವಿದ್ಯಾಲಯ ಎರಡು ಬಾರಿ ಚಿಂತಿಸಿ ಪಟ್ಟಿ ಅಂತಿಮಗೊಳಿಸಬೇಕು. ಸಾಧಕರನ್ನು ಗುರ್ತಿಸಬೇಕು, ಇದು ವಿವಿ ಜವಾಬ್ದಾರಿ. ಕಳೆದೆರಡು ವರ್ಷಗಳಲ್ಲಾದಂತೆ ಈ ವರ್ಷ ಪುನರಾವರ್ತನೆ ಆಗಬಾರದು. ಹತ್ತಾರು ಜನರಿಗೆ ಗೌರವ ಡಾಕ್ಟರೇಟ್ ಕೊಡದೆ ಸಂಖ್ಯಾಮಿತಿಯೂ ಬೇಕು, ಮೂರಕ್ಕೆ ಮೀರಬಾರದು.
ಟಿ ಸುಭಾಸ ರಾಠೋಡ
ವಿಶ್ವವಿದ್ಯಾಲಯಕ್ಕೊಂದು ಘನತೆ ಇರ್ತದೆ. ಗೌಡಾಗಳಿಗೂ ಮರ್ಯಾದೆ ಬೇಕಲ್ರಿ, ಅದಕ್ಕೇ ಗೌಡಾ ಕೊಡುವಾಗಲೇ ನಾಲ್ಕಾರು ಬಾರಿ ಯೋಚಿಸಿದರೆ ತಪ್ಪೇನು, ಸಿಂಡಿಕೇಟ್ನಲ್ಲಿ ಚರ್ಚೆ ಆಗುವುದೊಂದು, ಪಟ್ಟಿ ಬೇರೊಂದು ಆಗಬಾರ್ದು. ಸಮಾಜ ಮೆಚ್ಚಿದ ಸಾಧನೆ ಮಾಡಿದವರಿಗೆ ಗುರುತಿಸೋಣ. ಜಾತಿ- ಮತಗಳನ್ನೇ ಆಧಾರವಾಗಿಟ್ಟುಕೊಂಡು ಗೌಡಾ ಆಯ್ಕೆ ಮಾಡುವುದು ಬೇಡ.
ಟಿ ಉಷಾ ಶರ್ಮಾ
ಗುವಿವಿ ಹೈ-ಕ ಭಾಗದಲ್ಲಿದೆ. ಹೀಗಾಗಿ ಈ ನೆಲದ ಸಾಧಕರನ್ನೇ ಗುರ್ತಿಸಬೇಕು. ಅದನ್ನ ಬಿಟ್ಟು ತಮಗೆ ಬೇಕಾದವರಿಗೆ, ದೂರದವರಿಗೆ ಗೌಡಾ ಕೊಡುವುದು ತಪ್ಪು. ಇಲ್ಲಿನ ಸಮಾಜ ಸೇವಕರು, ಸಾಧಕರು, ವಿವಿಧ ರಂಗಗಳಲ್ಲಿ ಹೆಸರು ಮಾಡಿದವರಿದ್ದರೂ ಅದ್ಯಾಕೆ ಹೊರಗಿನವರಿಗೆ ಆಹ್ವಾನ ನೀಡಬೇಕು, ವಿವಿ ಗೌರವ- ಘನತೆ ಕಾಪಾಡುವಂತಾಗಬೇಕು. ಗೌಡಾ 5ರ ಮಿತಿ ಮೀರಬಾರದು.
ಟಿ ರಾಘವೇಂದ್ರ ಕುಲ್ಕರ್ಣಿ ಕೋಗನೂರು
ವಿವಿ ಕೊಡುವ ಗೌಡಾಕ್ಕೆ ಅರ್ಹರಿದ್ದವರಿಗೆ ಆರಿಸಬೇಕ್ರಿ, ನನಗೂ ಕೊಡ್ರಿ, ಅವರಿಗೂ ಕೊಡ್ರಿ ಅಂತ ಬಂದವರಿಗೆಲ್ಲರಿಗೂ ಕೊಟ್ರ ಹ್ಯಾಂಗ್ರಿ.. ಇನ್ನೂ ಸಭೆ ಆಗಿಲ್ಲ, ಚರ್ಚೆನೂ ಆಗಿಲ್ಲ. ಜನಾಭಿಪ್ರಾಯ ಗಮನಿಸಿ, ಸಾರ್ವಜನಿಕರ ಅನಿಸಿಕೆಗೆ ಬೆಲೆ ಕೊಟ್ಟು, ಹಿಂದಿನಂತೆ ಈ ಬಾರಿಯೂ ತಪ್ಪುಗಳಾಗದಂತೆ ಗೌಡಾ ಕೋಡುವ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಕುಲಪತಿಗಳ ಗಮನ ಸೆಳೆಯುವೆ. ವಿವಿ ಘನತೆ ರಕ್ಷಣೆ ನಮ್ಮ ಹೊಣೆ.
ಟಿ ಎಸ್.ಜಿ. ಭಾರತಿ