ನೀರೆಯರಿಂದ ಗ್ರಾಪಂ ಕಚೇರಿ ಮುತ್ತಿಗೆ

Updated on: 

ಯಾದಗಿರಿ: ಇಲ್ಲಿಗೆ ಸಮೀಪದ ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದ ವಡ್ಡರ ಬಡಾವಣೆ  ನಿವಾಸಿಗಳು ಕುಡಿವ ನೀರಿಗಾಗಿ ಆಗ್ರಹಿಸಿ ಸೋಮವಾರ ಖಾಲಿ ಕೊಡಗಳನ್ನು ಹಿಡಿದು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
 ಕಳೆದ ಒಂದು ವರ್ಷದಿಂದ ಕುಡಿವ ನೀರಿಗಾಗಿ ಪರದಾಡುತ್ತಿದ್ದರೂ ಯಾರೂ ಕೇಳುತ್ತಿಲ್ಲ. ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲೂ ನೀರಿಗಾಗಿ ಸುಮಾರು ಒಂದೂವರೆ ಕಿಮೀ ದೂರದ ಬೊರ್‌ವೆಲ್‌ಗೆ ಹೋಗಿ ನೀರು ತರಬೇಕು. ಮಕ್ಕಳು ಶಾಲೆ ಬಿಟ್ಟು ನೀರು ತರುವುದೇ ಕಾಯಕವಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಕೊಡಗಳ ಪ್ರದರ್ಶನ: ಕೃಷಿ, ಕೂಲಿ ಕೆಲಸ ಬಿಟ್ಟು ನೀರು ತರಬೇಕು. ನೀರಿಗಾಗಿ ಹೋರಾಡಿ ಸಾಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು, ಸೋಮವಾರ ಬೆಳಗ್ಗೆ ಗ್ರಾಪಂ ಕಚೇರಿಗೆ ಖಾಲಿ ಕೊಡಗಳನ್ನು ಹಿಡಿದು ಆಗಮಿಸಿದರು.   ಕಚೇರಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸುಮಾರು 1500ಕ್ಕೂ ಹೆಚ್ಚು ಜನರು ಬಡಾವಣೆಯಲ್ಲಿ ವಾಸಿಸುತ್ತಾರೆ. ಒಂದು ವರ್ಷದಿಂದಲೂ ಸಮೀಪದಲ್ಲಿನ ಬೋರ್‌ವೆಲ್ ಕೆಟ್ಟು ಕುಡಿವ ನೀರಿಗಾಗಿ ಪರದಾಡುವಂತಾಗಿದೆ.
 ಎರಡು ಬೋರ್‌ವೆಲ್‌ಗಳಲ್ಲಿ ಉಪ್ಪು ನೀರು ಬರುತ್ತಿದೆ. ಬಡಾವಣೆಯಲ್ಲಿ ನಿರ್ಮಿಸುವ ನೀರಿನ ಟ್ಯಾಂಕ್ ಬೇರೆಡೆ ಸ್ಥಳಾಂತರಿಸಲಾಗಿದೆ. ಇದರಿಂದ ಬಡಾವಣೆ ನಿವಾಸಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಪಿಡಿಒ ಸಿದ್ರಾಮಪ್ಪ ಕ್ಯಾತಕಟ್ಟೆ ಆಗಮಿಸಿ, ಒಂದು ವಾರದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಒಂದು ವಾರದೊಳಗೆ ನೀರಿನ ವ್ಯವಸ್ಥೆ ಮಾಡದಿದ್ದರೆ ಹೆದ್ದಾರಿ ತಡೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.   ವೆಂಕಟೇಶ ಕಟ್ಟಿಮನಿ, ಅಶ್ಪಾಕ್ ದೇವದುರ್ಗ, ಈಶಪ್ಪ ಈಳಿಗೇರ್, ಶರಣಪ್ಪ, ನಾಗಪ್ಪ, ದೇವಪ್ಪ, ಬಸ್ಸಪ್ಪ, ನಾರಾಯಣ, ಯಂಕಪ್ಪ, ಸೈಯದಲಿ ಮತ್ತಿತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com