ಸಿಎಂಗೆ ಮನವಿಗಳ ಮಹಾಪೂರ

Updated on: 

ಗುಲ್ಬರ್ಗ: ನಗರಕ್ಕೆ ಬುಧವಾರ ಆಗಮಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿವೆ.
ನಾಗರಿಕ ಹೋರಾಟ ಸಮಿತಿ: ಕುಡಿವ ನೀರಿನ ಖಾಸಗೀಕರಣ ನೀತಿಯನ್ನು ಹಿಂತೆಗೆದುಕೊಳ್ಳಬೇಕು, ನಗರಕ್ಕೆ ಸಮರ್ಪಕ ಮತ್ತು ಶುದ್ಧ ಕುಡಿವ ನೀರು ಒದಗಿಸಬೇಕು, ಹದಗೆಟ್ಟ ರಸ್ತೆ ಸರಿಪಡಿಸಿ ಹಾಗೂ ಫುಟ್‌ಪಾತ್ ನಿರ್ಮಿಸಬೇಕು, ಅವ್ಯವಸ್ಥೆಯಾಗಿರುವ ಒಳಚರಂಡಿ ದುರಸ್ತಿಪಡಿಸಬೇಕು, ಸಮರ್ಪಕ ಬೀದಿ ದೀಪಗಳನ್ನು ಕಲ್ಪಿಸಬೇಕು, ಉದ್ಯಾನವನಗಳು ಹಾಗೂ ಪ್ರಾಣಿ ಸಂಗ್ರಹಾಲಯ ರಕ್ಷಿಸಬೇಕು, ಸಾರ್ವಜನಿಕ ಶೌಚಾಲಯ, ಮೂತ್ರಾಲಯ ಹಾಗೂ ಕಸ ವಿಲೇವಾರಿಯ ಸಮಸ್ಯೆ ನಿವಾರಿಸಬೇಕು, ಟ್ರಾಫಿಕ್ ಮತ್ತು ಪಾರ್ಕಿಂಗ್ ಉತ್ತಮಗೊಳಿಸಬೇಕು ಹಾಗೂ ನಾಗರಿಕರಿಗೆ ಸುರಕ್ಷತೆ ಮತ್ತು ಭದ್ರತೆ ಕಲ್ಪಿಸಬೇಕು ಎಂದು ನಗರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಗುಲ್ಬರ್ಗ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ನಾಗಮ್ಮಾಳ, ಕೆ.ಎ. ಕಲಬುರ್ಗಿ, ವಿ.ಜಿ. ದೇಸಾಯಿ, ಕೆ.ವಿಶ್ವನಾಥ, ಸುಬ್ಬಾರಾವ ಕುಲಕರ್ಣಿ, ಮುರುಗೇಂದ್ರ ಚಿಂಚೋಳಿ, ಸಿ.ಕೆ. ಗುಮ್ಮಾ, ಸಂತೋಷಕುಮಾರ ಹಿರವೇ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರೈತ ಅಭಿವೃದ್ಧಿ ಸಂಘ: ಪ್ರತಿ ಕ್ವಿಂಟಲ್ ತೊಗರಿಗೆ 5 ಸಾವಿರ ಉತ್ತೇಜಕ ಬೆಂಬಲ ಬೆಲೆ ನಿಗದಿಪಡಿಸಬೇಕು, ವಿದೇಶಗಳಿಂದ ಆಮದು ಆಗುವ ತೊಗರಿಯ ಮೇಲೆ ಶೇ.50 ರಷ್ಟು ತೆರಿಗೆ ವಿಧಿಸಬೇಕು ಮತ್ತು ಇಲ್ಲಿನ ತೊಗರಿ ಮಂಡಳಿಗೆ 100 ಕೋಟಿ ಅನುದಾನ ಬಿಡುಗಡೆಗೊಳಿಸಬೇಕೆಂದು ರೈತ ಅಭಿವೃದ್ಧಿ ಸಂಘದ ಉಮಾಪತಿ ಪಾಟೀಲ್, ನಿಸ್ಸರ್ ಪಟೇಲ್ ಒತ್ತಾಯಿಸಿದರು.
ಆರ್‌ಪಿಐ: ಬೆಂಗಳೂರು ವಿಧಾನಸೌಧದ ಎದುರುಗಡೆ ಇರುವ ಡಾ. ಅಂಬೇಡ್ಕರ್ ಅವರ ಪ್ರತಿಮೆ ಸ್ಥಳಾಂತರ ಮಾಡಬಾರದೆಂದು ಭಾರತೀಯ ರಿಪಬ್ಲಿಕನ್ ಪಕ್ಷ(ಅ) ರಾಜ್ಯಾಧ್ಯಕ್ಷ ಎ. ಬಿ. ಹೊಸಮನಿ, ಜಿಲ್ಲಾ ಮುಖಂಡರಾದ ಮಿಲಿಂದ ಕಣಮುಸ್, ಭೀಮಾಶಂಕರ ಕಟ್ಟಿಸಂಗಾವಿ ಸಿಎಂ ಅವರಿಗೆ ಮನವಿ ಮಾಡಿದರು.
ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘ: ಸತತ ಭೀಕರ ಬರಗಾಲದಿಂದ ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಮುಖಂಡರಾದ ಶಿವಾನಂದ ಪಾಟೀಲ್, ಚನ್ನಬಸಪ್ಪ ಡಿ. ಪಾಟೀಲ್, ರಾಜಶೇಖರ ಮುತ್ತಗಿ, ಶರಣಮ್ಮ ಚಿತ್ತಾಪುರ, ಅರ್ಚನಾ ಆರ್. ಎಂ, ವಿಮಲಾಬಾಯಿ, ಮಲ್ಲು ರಾಮತೀರ್ಥ, ಜ್ಯೋತಿ ರೇವಣಸಿದ್ದಪ್ಪ, ಗೋರಕನಾಥ ರೆಡ್‌ಡಿ, ಚಂದ್ರಕಾಂತ ಧನ್ನಿ, ಹಣಮಂತರಾವ ಮಿರಗಿ, ಇಕ್ಬಾಲ್ ಭಾಗವಾನ, ಶ್ರೀಮಂತ ಬೋಲ್‌ಡೆ, ಬಸವರಾಜ ಪಾಟೀಲ್ ಇತರ ರೈತರು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸೇನೆ: ಅಫಜಲ್ಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಎರಡೂವರೆ ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಮಾಡಿದ ಪಾಪಿಯನ್ನು ಕೂಡಲೇ ಬಂಧಿಸಿ ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ದಲಿತ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಯಳಸಂಗಿ, ಮುಖಂಡರಾದ ನಾಗೇಂದ್ರ ಜವಳಿ, ಡಿ.ಕೆ. ಮದನಕರ್, ಮಹ್ಮದ್ ಮೈನೊದ್ದೀನ್, ಶಿವಕುಮಾರ ಮುಡ್ಡಿ, ಮೋಹನ ಕೋರೆ, ಅನಸಾರಸಾಬ್ ಮುಲ್ಲಾ, ವಿಜಯಕುಮಾರ ಜೋಗುರ, ಸಂತೋಷ ಪಾಳಾ, ವಿನೋದ ಸರಡಗಿ, ಆನಂದ ಮರತೂರ, ಮಲ್ಲಿಕಾರ್ಜುನ ನಾಗೂರ, ರಾಜಕುಮಾರ ಹುಗ್ಗಿ ಸಿಎಂ ಅವರಿಗೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ಕೂಡಲೇ ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸಬೇಕು, ಅತ್ಯಾಚಾರಿಗಳ ವಿರುದ್ಧ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಅವರಿಗೆ ಗಡಿಪಾರು ಮಾಡಬೇಕು, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com