ಚಿತ್ತಾಪುರ: ಮನೆ ಇಲ್ಲದ ಕಡುಬಡವರು, ನಿರ್ಗತಿಕರನ್ನು ಗುರುತಿಸಿ ನಿಜವಾದ ಫಲಾನುಭವಿಗಳ ಆಯ್ಕೆ ಮಾಡಿ ಸರ್ಕಾರದ ನಿವೇಶನಗಳನ್ನು ನೀಡಲು ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕ ವಾಲ್ಮೀಕಿ ನಾಯಕ ಸೂಚಿಸಿದರು.
ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯ್ಕೆ: 2010-11ನೇ ಸಾಲಿನ ವಾಜಪೇಯಿ ನಗರ ನಿವೇಶನ ಯೋಜನೆಯಡಿಯಲ್ಲಿ 8 ಎಕರೆ 18 ಗುಂಟೆ ಜಮೀನಿನಲ್ಲಿ 241 ನಿವೇಶನಗಳು ಫಲಾನುಭವಿಗಳ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಮಹಿಳಾ ಫಲಾನುಭವಿಗಳಿಗೆ ಈ ನಿವೇಶನಗಳು ನೀಡಲಾಗುವುದು. ಬಡತನ ರೇಖೆಯಲ್ಲಿ ಜೀವನ ಸಾಗಿಸಿರಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ವಸತಿ ರಹಿತರಾಗಿರಬೇಕು. ಪಜಾ- 45, ಪಪಂ-12, ಸಾಮಾನ್ಯ-193 ಫಲಾನುಭವಿಗಳಿಗೆ ನಿವೇಶನ ಕಲ್ಪಿಸಲಾಗುವುದು ಎಂದು ಹೇಳಿದರು.
ಆಶ್ರಯ ಕಾಲೋನಿಯಲ್ಲಿ ಕೆಲವರು ಫಲಾನುಭವಿಗಳಲ್ಲದವರು ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆಂಬ ದೂರುಗಳು ಬಂದಿವೆ. ಅಕ್ರಮವಾಗಿ ನಿರ್ಮಿಸುವುದನ್ನು ಕೂಡಲೇ ತಡೆಯಬೇಕು. ಅಕ್ರಮವಾಗಿ ನಿರ್ಮಿಸಿಕೊಳ್ಳುತ್ತಿರುವಾಗ ಅಧಿಕಾರಿ ಹಾಗೂ ಸಿಬ್ಬಂದಿ ಏಕೆ ಸುಮ್ಮನೆ ಕುಳಿತಿರಿ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.
ಸಹಕಾರ: ಆಶ್ರಯ ಕಾಲೋನಿಯಲ್ಲಿ ಎಷ್ಟು ಎಕರೆ ಜಮೀನು ಬಳಸಿಕೊಳ್ಳಲಾಗಿದೆ. ಇನ್ನೂ ಎಷ್ಟು ನಿವೇಶನಗಳು ಖಾಲಿ ಉಳಿದಿವೆ ಮಾಹಿತಿ ನೀಡಬೇಕು. ಸರ್ಕಾರದ ಆಸ್ತಿ ಅಕ್ರಮವಾಗಿ ನಿರ್ಮಿಸಿಕೊಳ್ಳುವಂತಿಲ್ಲ. ಅಧಿಕಾರಿಗಳು ಮೌನವಹಸಿ ಅಕ್ರಮ ಮಾಡಿಕೊಳ್ಳುವವರಿಗೆ ಸಹಕಾರ ನೀಡಲಾಗುತ್ತಿದೆ ಎಂಬ ಸಂಶಯ ಬರುತ್ತಿದೆ. ಅಕ್ರಮಕ್ಕೆ ಸಹಕಾರ ನೀಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳವಂತೆ ಅವರು ಸೂಚಿಸಿದರು.
2012-13ನೇ ಸಾಲಿನ ವಾಜಪೇಯಿ ನಗರ ನಿವೇಶನ ಯೋಜನೆಯಡಿಯಲ್ಲಿ 250 ಫಲಾನುಭವಿಗಳ ನಿವೇಶನಕ್ಕಾಗಿ 6 ಎಕರೆ ಜಮೀನು ಖರೀದಿಸಲು ಹಾಗೂ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು 300 ಫಲಾನುಭವಿಗಳ ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುರಸಭೆ ಅಧ್ಯಕ್ಷ ಸುವನರೆಡ್ಡಿ ಗೌಡಪ್ಪಗೌಡ, ನಗರ ಆಶ್ರಯ ಸಮಿತಿ ಸದಸ್ಯರಾದ ಬಸವರಾಜ ಚಿನ್ನಮಳ್ಳಿ, ರಾಮದಾಸ ಚವ್ಹಾಣ, ಸುಮಿತ್ರಾ ಸಿಂಪಿ, ಮುಖ್ಯಾಧಿಕಾರಿ ಅಶೋಕ ಬಿಲಗುಂದಿ, ಲೆಕ್ಕಾಧಿಕಾರಿ ಮುತ್ತಣ್ಣ ಭಂಡಾರಿ, ಹಸನ ಪಟೇಲ್ ಉಪಸ್ಥಿತರಿದ್ದರು.