ಕೆಂಭಾವಿ: ಪಟ್ಟಣದಲ್ಲಿ ನಾರಾಯಣಪುರ ಎಡದಂಡೆ ಕೃಷ್ಣಾ ಕಾಲುವೆಗೆ ಜಿಪಂ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ ಶನಿವಾರ ಬಾಗಿನ ಸಮರ್ಪಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯು ಬರಗಾಲದಿಂದ ತತ್ತರಿಸುತ್ತಿದ್ದರೂ ದೇವರ ದಯೆದಿಂದ ಕೃಷ್ಣೆ ಅನುಗ್ರಹಿಸಿದ್ದಾಳೆ. ರೈತರ ಜಮೀನಿಗೂ ನೀರು ತಲುಪಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಈ ನೀರನ್ನು ಪೋಲಾಗದಂತೆ ಹನಿ ನೀರನ್ನೂ ರಕ್ಷಿಸಿ ಸಮರ್ಪಕವಾಗಿ ಬಳಕೆ ಮಾಡುವಂತೆ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಲುವೆಗಳು ಒಡೆದು ಹೋಗಿ ಕೊನೆಯ ಭಾರದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ ಎಂಬ ರೈತರ ಸಮಸ್ಯೆಯನ್ನು ಅರಿತು, ಈ ಬಾರಿ ಕೇಂದ್ರ- ರಾಜ್ಯ ಸರ್ಕಾರ ವಿಶೇಷ ಅನದಾನ ಬಿಡುಗಡೆ ಮಾಡಿದ್ದು ನವೀಕರಣ ಕಾರ್ಯಕೈಗೊಂಡಿದ್ದಾರೆ.
ವಿಶೇಷ ಪ್ಯಾಕೇಜ್: ನೀರಾವರಿ ಅಧಿಸೂಚಿತ ಪ್ರದೇಶ 1.36 ಲಕ್ಷ ಹೆಕ್ಟೇರ್. ಇದರಲ್ಲಿ ಜೌಗು 14.7 ಸಾವಿರ ಹೆಕ್ಟೇರ್. ಸವಳು 7.1 ಸಾವಿರ ಹೆಕ್ಟೇರ್, ಕರ್ಲು 4.5 ಸಾವಿರ ಹೆಕ್ಟೇರ್. ಒಟ್ಟು 26.10 ಸಾವಿರ ಹೆಕ್ಟೇರ್ ಸಮಸ್ಯಾತ್ಮಕ ಮಣ್ಣು ಒಳಗೊಂಡ ಕ್ಷೇತ್ರವಾಗಿದೆ. ಉಳಿದ 1.56 ಲಕ್ಷ ಹೆಕ್ಟೇರ್ ಮಾತ್ರ ನಾರಾಯಣಪುರ ಎಡದಂಡೆ ಕಾಲುವೆಯಿಂದ ನೀರಾವರಿಗೆ ಒಳಪಡುತ್ತದೆ. ಈ ಸಮಸ್ಯಾತ್ಮಕ ಭೂಮಿಗೆ ವಿಶೇಷ ಪ್ಯಾಕೇಜ್ನಲ್ಲಿ ರೈತರ ಉಪಯೋಗಕ್ಕೆ ಯೋಜನೆಯನ್ನು ರೂಪಿಸಲಾಗಿದೆ.
ಏ.15ರವರೆಗೆ ನೀರು ಹರಿಸಲು ಮನವಿ: ಆಲಮಟ್ಟಿಯಲ್ಲಿ ಶನಿವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ರೈತರ ಹಿತದೃಷ್ಟಿಯಿಂದ ಏ.15ರವರೆಗೆ ನೀರು ಹರಿಸುವಂತೆ ಮನವಿ ಮಾಡಿದ್ದೇನೆಂದರು.
ಎಪಿಎಂಸಿ ನಾಮನಿರ್ದೇಶನ ಸದಸ್ಯ ವಾಮನರಾವ ದೇಶಪಾಂಡೆ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವರಾವ್ ಕುಲ್ಕರ್ಣಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಿಪಾಲರೆಡ್ಡಿ ದಿಗ್ಗಾವಿ, ರಾಘವೇಂದ್ರಾಚಾರ್ಯ, ರಂಗಪ್ಪ ವಡ್ಡರ್, ರೆಹೆಮಾನ್ ಪಟೇಲ್, ದೇವು ಯಾಳಗಿ, ದೇವು ಮ್ಯಾಗೇರಿ, ರಾಜು ಚಿಕ್ಕಮಠ ಇತರರು ಉಪಸ್ಥಿತರಿದ್ದರು.