ಯಾದಗಿರಿ: ನಗರದ 31ನೇ ವಾರ್ಡ್‌ನಲ್ಲಿ ಮಾಸಿಕ ಕುಂದುಕೊರತೆ ಆಲಿಕೆ ವಿನೂತನ ಸಭೆಗೆ ನಗರಸಭೆ ಸದಸ್ಯೆ ಲಲಿತಾ ಅನಪುರ ಭಾನುವಾರ ಚಾಲನೆ ನೀಡಿ, ವಿವಿಧ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ವಾರ್ಡ್ 31ರ ವ್ಯಾಪ್ತಿಯ ಹೊಸಳ್ಳಿ ಕ್ರಾಸ್, ಚಿರಂಜೀವಿ ನಗರ ಮತ್ತು ಅಜೀಜ್ ಕಾಲೋನಿಗಳಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಂಡಿವೆ. ವಿದ್ಯುತ್ ಮತ್ತು ಸಾರ್ವಜನಿಕ ಉದ್ಯಾನವನ ನಿರ್ಮಾಣಕ್ಕೆ ಪ್ರಯತ್ನಿಸಲಾಗಿದೆ. ಎಲ್ಲರ ಸಹಕಾರದಿಂದ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ವಾರ್ಡ್ ನಿವಾಸಿಗಳು ಯಾವುದೇ ಸಂದರ್ಭದಲ್ಲಿ ನಗರಸಭೆಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಬಹುದು. ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಚರಂಡಿಗಳಲ್ಲಿ ಹೂಳು: ಮಳೆಗಾಲವಾದ್ದರಿಂದ ವಾರ್ಡ್ ಬಡಾವಣೆಗಳಲ್ಲಿನ ಚರಂಡಿಗಳು ಸಂಪೂರ್ಣ ಹೂಳು ತುಂಬಿದ್ದು, ಇದರಿಂದ ಜನತೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅಲ್ಲದೆ ಜಾಲಿ ಬೆಳದು ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಒಳಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಾಗಿನಿಂದ ರಸ್ತೆ ಸಂಪೂರ್ಣ ಹಾಳಾಗಿವೆ ಎಂದರು. ನಂತರ ಬಡಾವಣೆಗಳಲ್ಲಿನ ಚರಂಡಿಗಳಲ್ಲಿನ ಹೂಳನ್ನು ತಾತ್ಕಾಲಿಕವಾಗಿ ತೆಗೆಯಲು ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ನಗರಸಭೆ ಅಧಿಕಾರಿ ಸಂಜಯ ಕುಲಕರ್ಣಿ, ಬಸವರಾಜ ಮಹಾಮನಿ, ಹಿರಿಯ ವಕೀಲ ನರಸಿಂಗರಾವ ಕುಲಕರ್ಣಿ ಇದ್ದರು.
Advertisement