ಮುಷ್ಕರದ ಎಚ್ಚರಿಕೆ

Updated on

ಗುಲ್ಬರ್ಗ: ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಪ್ರಮಾಣದಲ್ಲಿ ಏರಿಕೆ ಮಾಡುವುದು, ವಿಮಾ ಮಸೂದೆ ತಿದ್ದುಪಡಿ ವಿಚಾರ ದೇಶದ ಆರ್ಥಿಕತೆಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಪ್ರಸ್ತುತ ಶೇ.26 ಇರುವ ವಿಮಾ ಎಫ್‌ಡಿಐ ಪ್ರಮಾಣ ಶೇ.49ರಷ್ಟು ಹೆಚ್ಚಿಸಲು ಮುಂದಾಗಿರುವ ಕೇಂದ್ರದ ಕ್ರಮ ಜನವಿರೋಧಿ ಎಂದಿರುವ ವಿಮಾ ನೌಕರರ ಸಂಘಟನೆ, ಮುಷ್ಕರದ ಬೆದರಿಕೆಯೊಡ್ಡಿದೆ.
ನಗರದಲ್ಲಿ ಮಂಗಳವಾರ ವಿಮಾ ನೌಕರರ ಸಂಘದ ರಾಯಚೂರು ವಲಯ ಪ್ರಧಾನ ಕಾರ್ಯದರ್ಶಿ ಎಂ. ರವಿ ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ತಿಳಿಸಿದ್ದು, 2011ರಲ್ಲಿ ಹಣಕಾಸು ಸಚಿವ ಯಶವಂತ ಸಿನ್ಹಾ ನೇತೃತ್ವದ ಸಮೀತಿಯೇ ವಿದೇಶಿ ಬಂಡವಾಳ ವಿಮಾ ಕ್ಷೇತ್ರಕ್ಕೆ ಒಗ್ಗೋದಿಲ್ಲ ಎಂದು ಹೇಳಿದೆ. ಇದು ಗೊತ್ತಿದ್ದರೂ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸಿದ್ದು ಸರಿಯಾದ ಕ್ರಮವಲ್ಲ ಎಂದು ರವಿ ಹೇಳಿದ್ದಾರೆ.
ಈಗಾಗಲೇ ವಿಮಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ನಿತ್ಯ ದೇಶಾದ್ಯಂತ ಬುದ್ಧಿಜೀವಿಗಳು, ವಿಮಾ ಗ್ರಾಹಕರು ಸೇರಿದಂತೆ ಎಲ್ಲ ಜನತೆ 15ರಿಂದ 20 ಸಾವಿರದಷ್ಟು ಪತ್ರಗಳನ್ನು ಬರೆದು ಹಣಕಾಸು ಸಚಿವರಿಗೆ ರವಾನಿಸುತ್ತಿದ್ದಾರೆ ಎಂದರು.
ಉದ್ದೇಶಿತ ಮಸೂದೆ ಕೈಬಿಡಿ: ಯುಪಿಎ-1 ಸರ್ಕಾರದಲ್ಲೇ ವಿಮಾ ಮಸೂದೆ ತಿದ್ದುಪಡಿ ಮಂಡನೆಯಾಗಿತ್ತು. ಹೋರಾಟಗಳಿಂದಾಗಿ ಅದು ಅಂಗೀಕಾರ ಪಡೆದಿಲ್ಲ. ನೌಕರರ ಹೋರಾಟಗಳಿಂದಾಗಿ ಈ ಮಸೂದೆ ಅಂಗೀಕಾರ ಪಡೆಯದಂತಹ ವಾತಾವರಣ ಇದೆ. ಉದ್ದೇಶಿತ ವಿಮಾ ಮಸೂದೆ-2008 ತಿದ್ದುಪಡಿ ಕೈಬಿಡಬೇಕು. ವಿಮಾ ಕ್ಷೇತ್ರದಲ್ಲಿನ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸುವ ಪ್ರಸ್ತಾವನೆಯನ್ನೂ ಕೇಂದ್ರ ಸರ್ಕಾರ ಕೈಬಿಡಬೇಕೆಂಬುದು ನೌಕರರ ಆಗ್ರಹ ಎಂದರು.
ಈಗಾಗಲೇ ತಮ್ಮ ಸಂಘಟನೆ ಹೈ-ಕ ಭಾಗದ ಕೊಪ್ಪಳ, ರಾಯಚೂರು ಹಾಗೂ ಬೀದರ್ ಸಂಸದರನ್ನು ಭೇಟಿ ಮಾಡಿದೆ. ಕಾಂಗ್ರೆಸ್ ಸಂಸದೀಯ ನಾಯಕ ಖರ್ಗೆಯವರಿಗೆ ಪತ್ರ ಬರೆದು ವಿಮಾ ಕಾಯ್ದೆ ತಿದ್ದುಪಡಿಗೆ ವಿರೋಧ ಯಾಕೆ ಎಂಬುದನ್ನು ವಿವರಿಸಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ತಮ್ಮ ನೆರವಿಗೆ ನಿಲ್ಲುತ್ತವೆ ಎಂಬ ಭರವಸೆ ತಮಗಿದೆ ಎಂದರು.
ಐಆರ್‌ಡಿಎ ವರದಿ ಗಮನಿಸಿ: ವಿಮಾ ಬಂಡವಾಳ ನೇರವಾಗಿ ದೇಶದ ಪ್ರಗತಿಯಲ್ಲಿ ಹೂಡಿಕೆಯಾಗುತ್ತಿದೆ. ಇದಕ್ಕೆ ಎಲ್‌ಐಸಿ ಸದಾ ಬದ್ಧ. ಆದರೆ ಹೊರಗಿನ ಕಂಪನಿಗಳು ಇಲ್ಲಿನ ಲಾಭದ ಮೇಲೆ ಕಣ್ಣಿಟ್ಟು ಬರುತ್ತಿವೆ. ಹಾಗೆ ಬಂದಿರುವ ಕಂಪನಿಗಳು ಕ್ಲೇಮ್‌ಗಳ ವಿಚಾರದಲ್ಲಿ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡುತ್ತಿಲ್ಲ ಎಂದು ಐಆರ್‌ಡಿಎ ತನ್ನ ವರದಿಯಲ್ಲಿ ಹೇಳಿದೆ. ಹೀಗಿರುವಾಗ ವಿದೇಶಿ ನೇರ ಬಂಡವಾಳಕ್ಕೆ ವಿಮಾ ರಂಗವನ್ನು ಇನ್ನಷ್ಟು ತೆರೆದುಕೊಳ್ಳುವಂತೆ ಮಾಡುವುದರಲ್ಲಿ ಯಾವ ಅರ್ಥವಿದೆ ಎಂದು ಪ್ರಶ್ನಿಸಿದರು.
ಒಂದು ವೇಳೆ ಮುಷ್ಕರ, ಪ್ರತಿಭಟನೆಗಳನ್ನೆಲ್ಲ ಮೀರಿ ಕೇಂದ್ರ ವಿಮಾ ಮಸೂದೆ ತಿದ್ದುಪಡಿಗೆ ಸರ್ಕಾರ ಮುಂದಾದರೆ ನೌಕರರೆಲ್ಲ ಅಖಿಲ ಭಾರತ ಮಟ್ಟದಲ್ಲಿ ತೀವ್ರತರ ಮುಷ್ಕರಕ್ಕೆ ಮುಂದಾಗುತ್ತೇವೆಂದು ರವಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com