ಯಾದಗಿರಿ: ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಜನ್ಮದಿನದ ಬಗ್ಗೆ ಲಘುವಾಗಿ ಮಾತನಾಡಿದ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಒಂದು ದೊಡ್ಡ ಹುದ್ದೆಯಲ್ಲಿದ್ದು, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಗುರುಮಠಕಲ್ ಬಸ್ ನಿಲ್ದಾಣದ ಉದ್ಘಾಟನೆ ನಂತರ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಒಬ್ಬ ಹಿರಿಯ ನಾಯಕರ ಬಗ್ಗೆ ಅವರ ಘನತೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.
ಪ್ರಯಾಣಿಕರ ಹಿತದೃಷ್ಟಿಯಿಂದ ರಾಜ್ಯದಲ್ಲಿ 500ಕ್ಕೂ ಹೆಚ್ಚು ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಈಗಾಗಲೇ ಬೆಂಗಳೂರಿನ ಕೆಲವು ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಖಾಸಗಿ ಬಸ್‌ಗಳಲ್ಲಿ ಈ ರೀತಿಯ ಅಳವಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಕಡಿವಾಣ ಹಾಕಲು ಅತ್ಯಾಚಾರಿಗಳನ್ನು ಗುಂಡಾ ಕಾಯಿದೆ ಅಡಿಯಲ್ಲಿ ಬಂಧನ ಮಾಡಲಾಗುತ್ತಿದೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿದೆ. ಇದಕ್ಕಾಗಿ ಗೃಹ ಸಚಿವರ ರಾಜಿನಾಮೆ ಅವಶ್ಯಕತೆ ಇಲ್ಲ ಎಂದರು.
ಸಾರಿಗೆ ಇಲಾಖೆಯಲ್ಲಿ ಸುಮಾರು ಶೇ.52 ಹುದ್ದೆಗಳು ಖಾಲಿ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರವೇ ಕ್ರಮಕೈಗೊಳ್ಳಲಾಗವುದು. 5 ಆರ್‌ಟಿಒ ಕಾರ್ಯಾಲಯಗಳು ತೆರೆಯಲಾಗುವುದು. ಹಲವು ಜಿಲ್ಲೆಯಲ್ಲಿ 46 ಘಟಕಗಳನ್ನು ನಿರ್ಮಿಸಲಾಗುವುದು ಮತ್ತು ಆಯಾ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಬಸ್ ನಿಲ್ದಾಣ ಕಾಮಗಾರಿ ನವೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಬಹಳಷ್ಟು ಬಸ್‌ಗಳ ಕೊರತೆಯಿದ್ದು, ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
Advertisement