ಜೇವರ್ಗಿ: ರಾಜ್ಯ ಸರ್ಕಾರದ 3054 ಯೋಜನೆಯಲ್ಲಿ ತಾಲೂಕಿಗೆ 75 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಯಾವುದೇ ಕಾಮಗಾರಿ ನಡೆಸದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಾಪಂ ಸದಸ್ಯ ಭಗವಂತರಾಯ ಪಾಟೀಲ್, ವಿಜಯಲಕ್ಷ್ಮೀ ಆಂದೋಲಾ ಗಂಭೀರ ಆರೋಪ ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡುತ್ತಿದ್ದಂತೆಯೇ ಸಭೆಯಲ್ಲಿದ್ದ ಸದಸ್ಯರು ಎದ್ದು ನಿಂತು ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
3054 ಯೋಜನೆಯಡಿ ಬಿಡುಗಡೆಯಾದ ಅನುದಾನ, ಕೈಗೊಂಡ ಕಾಮಗಾರಿ ವಿವರ ನೀಡುವಂತೆ ಸದಸ್ಯರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಕೇಳಿದರು. ಈಗಾಗಲೇ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ಕುರನಳ್ಳಿಯಿಂದ ಹಾಲಘತ್ತರಗಾ ಗ್ರಾಮದವರೆಗಿನ 5 ಕಿಮೀ ರಸ್ತೆ ನಿರ್ಮಿಸಲಾಗಿದೆ. ಆದರೆ ಮತ್ತೆ ಅದೇ ರಸ್ತೆಗೆ 3054 ಯೋಜನೆಯಲ್ಲಿ ಪಂಚಾಯಿತಿರಾಜ್ ಇಲಾಖೆ ಖರ್ಚು ಹಾಕಿದೆ ಎಂದು ಸದಸ್ಯೆ ವಿಜಯಲಕ್ಷ್ಮೀ ಆರೋಪಿಸಿದರು.
ರಸ್ತೆ ಒಂದು, ಅನುದಾನ ಎರಡು!: ಒಂದೇ ರಸ್ತೆಗೆ ಎರಡು ಯೋಜನೆಗಳಲ್ಲಿ ಅನುದಾನ ಖರ್ಚು ಮಾಡಲಾಗಿದೆ. ಒಟ್ಟಾರೆ 75 ಲಕ್ಷ ಅನುದಾನದ ವಿವರವಾದ ಮಾಹಿತಿ ಸಭೆಗೆ ನೀಡುವಂತೆ ತಾಪಂ ಸದಸ್ಯ ಭಗವಂತರಾಯ ಪಾಟೀಲ್, ರೇವಣಸಿದ್ದಪ್ಪಗೌಡ ಕಮಾನಮನಿ ಅಧಿಕಾರಿಯನ್ನು ಕೇಳಿದರು. ಆಗ ಯೋಜನೆ ಕುರಿತು ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಇದರಿಂದ ಕೆರಳಿದ ಸದಸ್ಯರು ತಾಪಂ ಅಧ್ಯಕ್ಷರು, ಸದಸ್ಯರು ಈ ಯೋಜನೆಯ ಸದಸ್ಯರಿದ್ದರೂ ಯಾರಿಗೂ ಯೋಜನೆ ಕುರಿತು ಮಾಹಿತಿ ನೀಡದೇ ಕಾಮಗಾರಿಗಳ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಇದರ ಸಂಪೂರ್ಣ ತನಿಖೆ ನಡೆಸಬೇಕೆಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ಅದರಂತೆ ಟಾಸ್ಕ್‌ಫೋರ್ಸ್ ಯೋಜನೆಯಡಿ 48 ಕೊಳವೆಬಾವಿಗಳನ್ನು ಕೊರೆಸುವುದು ಹಾಗೂ ಯಂತ್ರಗಳ ಜೋಡಣೆ ಕಾರ್ಯದಲ್ಲಿ ಅನುದಾನ ದುರ್ಬಳಕೆ ಮಾಡಿಕೊಂಡಿದೆ ಎಂದು ಸದಸ್ಯ ಭಗವಂತರಾಯ ಪಾಟೀಲ್ ದೂರಿದರು.
ಕೃಷಿ ಅಧಿಕಾರಿ ಮಾಹಿತಿಗೆ ಆಕ್ರೋಶ
ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಸದಸ್ಯರಿಗೆ ಮಾಹಿತಿ ನೀಡುವಲ್ಲಿ ತಡವರಿಸಿದ ಘಟನೆ ನಡೆಯಿತು. ಕೃಷಿ ಇಲಾಖೆ ಪ್ರಗತಿ ಕುರಿತು ಚರ್ಚಿಸುತ್ತಿದ್ದಾಗ ಜುಲೈನಲ್ಲಿ 142 ಮಿಮೀ ಬೀಳಬೇಕಾದ ಮಳೆ 75 ಮಿಮೀ ಮಾತ್ರ ಬಿದ್ದಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡುತ್ತಿದ್ದಂತೆಯೇ ಆವೇಶಭರಿತರಾದ ಸದಸ್ಯರಾದ ಶರಣಗೌಡ ಹರನೂರ, ಭಗವಂತರಾಯ ಪಾಟೀಲ್, ಬಸವರಾಜ ನಾಗಾವಿ, ರೇವಣಸಿದ್ದಪ್ಪ ಕಮಾನಮನಿ ಅಧಿಕಾರಿ ನೀಡಿದ ಮಾಹಿತಿ ಸರಿಯಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಸಮರ್ಪಕ ಮಳೆ ಬಾರದ ಕಾರಣ ಈಗಾಗಲೇ ಬಿತ್ತನೆ ಮಾಡಿದ ಮುಂಗಾರು ಬೆಳೆಗಳು ನಾಟುತ್ತಿಲ್ಲ. ನಾಟಿದ ಅಲ್ಪಸ್ವಲ್ಪ ಬೆಳೆಗಳೂ ಒಣಗುತ್ತಿವೆ ಎಂದು ಸದಸ್ಯರು ಹೇಳಿದರು.
Advertisement