ಕ.ಪ್ರ. ವಾರ್ತೆ, ಯಾದಗಿರಿ, ಆ.6
ರಾಜ್ಯ ಸಾರಿಗೆ ಇಲಾಖೆ ಅನೇಕ ಸಮಸ್ಯೆ ಎದುರಿಸುತ್ತಿದ್ದರೂ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಗುರುಮಠಕಲ್ ಪಟ್ಟಣದಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ 2.10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಬರುವ ದಿನಗಳಲ್ಲಿ ಈ ಭಾಗದ ಸೈದಾಪುರದಲ್ಲಿ ಬಸ್ ನಿಲ್ದಾಣ ಹಾಗೂ ಕೆಂಭಾವಿಯಲ್ಲಿ ಬಸ್ ಡಿಪೋ ಸ್ಥಾಪನೆಗೆ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಯಾದಗಿರಿ ವಿಭಾಗಕ್ಕೆ 100 ಹೊಸ ಬಸ್: ಯಾದಗಿರಿ ವಿಭಾಗದಿಂದ ಸಾರಿಗೆ ಇಲಾಖೆಗೆ ಉತ್ತಮ ಆದಾಯ ಬರುತ್ತಿದೆ. ನಗರದ ಪ್ರಯಾಣಿಕರಿಗಾಗಿ ಈಗಾಗಲೇ 13 ಸಾರಿಗೆ ಬಸ್‌ಗಳನ್ನು ನೀಡಲಾಗಿದೆ. 2014-15ನೇ ಸಾಲಿನಲ್ಲಿ 45ಕ್ಕೂ ಹೆಚ್ಚಿನ ಅನುಸೂಚಿಗಳನ್ನು ಸೇರ್ಪಡೆಗೊಳಿಸಲಾಗುವುದು. ರಾಜ್ಯದಲ್ಲಿ ಒಟ್ಟು 828 ಬಸ್‌ಗಳನ್ನು ಹಾಗೂ ಯಾದಗಿರಿ ವಿಭಾಗಕ್ಕೆ 100 ಹೊಸ ಬಸ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಇಲಾಖೆಯಲ್ಲಿ ಖಾಲಿ ಇರುವ 3091 ಚಾಲಕರು ಹಾಗೂ ನಿರ್ವಾಹಕರು, 500 ಮೆಕ್ಯಾನಿಕ್, 490 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಗಣಕೀಕೃತ, ಗ್ರಂಥಾಲಯ, ಮಹಿಳಾ ವಿಶ್ರಾಂತಿ ಘಟಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಾಣಿಜ್ಯ ಮಳಿಗೆಗಳು ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುವುದು. ಯಾದಗಿರಿ ನಗರಕ್ಕೆ ಶೀಘ್ರದಲ್ಲಿಯೇ ಜೆ ನರ್ಮ್ ಯೋಜನೆಯಡಿಯಲ್ಲಿ ಇನ್ನೂ 14 ಸುಸಜ್ಜಿತ ನಗರ ಸಾರಿಗೆ ವಾಹನಗಳ ಕಾರ್ಯಾಚರಣೆ ಆರಂಭಿಸಿ ನಗರದಾದ್ಯಂತ ಪ್ರತ್ಯೇಕವಾಗಿ ಎಲ್ಲ ಬಡಾವಣೆಗಳಿಗೂ ಸಾರಿಗೆ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಖರ್ಗೆ ಮಾರ್ಗದರ್ಶನದಲ್ಲಿ ಅಭಿವೃದ್ಧಿ: ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನದಲ್ಲಿ ನಾನು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸೈದಾಪುರ ಭಾಗದಲ್ಲಿ ಈಗಾಗಲೇ 3300 ಎಕರೆ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಮಠಕಲ್ ಬಸ್ ನಿಲ್ದಾಣವನ್ನು 2 ಎಕರೆ 7 ಗುಂಟೆಯಲ್ಲಿ 2.10 ಕೋಟಿ ಸರ್ಕಾರದ ವಿಶೇಷ ಅಭಿವೃದ್ಧಿ ಅನುದಾನದಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಸ್ ನಿಲ್ದಾಣದಿಂದ ಪ್ರತಿವರ್ಷ 5.20 ಲಕ್ಷ ಆದಾಯ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಈ ಘಟಕಕ್ಕೆ 10 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮನವಿ: ವಿಧಾನ ಪರಿಷತ್ ಸದಸ್ಯೆ ಅಲ್ಲಂಪ್ರಭು ಪಾಟೀಲ್ ಮಾತನಾಡಿ, ಈ ಭಾಗದ ಗ್ರಾಮೀಣ ಪ್ರದೇಶದ ಎಲ್ಲ ಹಳ್ಳಿಗಳಿಗೆ ಬಸ್ ಸಂಚಾರ ಒದಗಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಜಿಪಂ ಅಧ್ಯಕ್ಷ ಸಿದ್ದಣ್ಣಗೌಡ ಪೊಲೀಸ್ ಪಾಟೀಲ್, ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಬನ್ನಪ್ಪ, ಜಿಪಂ ಸದಸ್ಯರಾದ ಶರಣಿಕುಮಾರ ದೋಖಾ, ಹನುಮೇಗೌಡ ಮರಕಲ್, ಭೀಮರಾಯ ಕಂದಕೂರ, ಶರಣಪ್ಪ ಮೊಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ತಾಪಂ ಅಧ್ಯಕ್ಷ ಪ್ರಕಾಶರಡ್ಡಿ ನಜಾರಾಪುರ, ಪಪಂ ಅಧ್ಯಕ್ಷೆ ರೇಣುಕಾ ಸಂಜೀವಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರಡ್ಡಿ ಸೇರಿದಂತೆ ಮತ್ತಿತರರು ಇದ್ದರು.
Advertisement