ಜ್ಯೋತಿ ಬಾ ಫುಲೆ ಜಯಂತ್ಯುತ್ಸವಕ್ಕೆ ಆಹ್ವಾನ

Updated on

ಗುರುಮಠಕಲ್: ಸಗರನಾಡು ಸೇವಾ ಪ್ರತಿಷ್ಠಾನ ಹಾಗೂ ಅಪ್ನಾ ದೇಶ ಅಸೋಸಿಯೆಶನ್ ಸಹಯೋಗದಲ್ಲಿ ಫೆಬ್ರವರಿ ಕೊನೆಯ ವಾರದಲ್ಲಿ ಯಾದಗಿರಿಯಲ್ಲಿ ಆಯೋಜಿಸುವ ಜ್ಯೋತಿ ಬಾ ಫುಲೆ ಜಯಂತಿ ಸಮಾರಂಭಕ್ಕೆ ಅತಿಥಿಗಳಾಗಿ ಭಾಗವಹಿಸಬೇಕೆಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಅಹಿಂದ ಘಟಕದ ಅಧ್ಯಕ್ಷ ಕೆ. ಮುಕುಡಪ್ಪ ಅವರಿಗೆ ಜಂಟಿ ಸಮಿತಿಗಳ ವತಿಯಿಂದ ಪ್ರವಾಸಿ ಮಂದಿರದಲ್ಲಿ ಆಹ್ವಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ, ಜ್ಯೋತಿ ಬಾ ಫುಲೆಯವರ ಅನುಯಾಯಿಗಳಾಗಿ ಅವರ ಚಿಂತನೆ ಮತ್ತು ತತ್ವಗಳ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತಲ್ಲಿರುವ ಮುಕುಡಪ್ಪ ಅವರು ಅತಿಥಿಗಳಾಗಿ ಭಾಗವಹಿಸಬೇಕೆಂದು ಆಹ್ವಾನ ನೀಡಿದರು. ಸೈದಪ್ಪ ಗುತ್ತೆದಾರ, ಬಸವರೆಡ್ಡಿ ಗುರುಮಠಕಲ್, ಬಸವರಾಜ ವರ್ಕನಳ್ಳಿ, ಸಿದ್ದು ಹತ್ತಿಕುಣಿ ಸೇರಿದಂತೆ ಇತರರು ಇದ್ದರು.

ಸಾಹೇಬರ ಅನುಗ್ರಹ ನಮ್ಮಮೇಲಿದೆ: ಶಾಸಕ ಗುರುಪಾಟೀಲ
ಶಹಾಪುರ: ಸಗರಗ್ರಾಮದಲ್ಲಿರುವ ಹಜರತ್ ಸೈಯದ್ ಸೋಫೀ ಸರಮತ್ ಮತ್ತು ಗೋಗಿಯ ಚಂದಾಹುಸೇನ  ಸಾಹೇಬರ ಅನುಗ್ರಹ ಬಲ ನಮ್ಮ ಮೇಲಿದೆ ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು. ಸಗರ ಗ್ರಾಮದ ಹಜರತ್ ಸೋಫೀ ಸರಮತ್ ಉಸರ್‌ನಲ್ಲಿ ಪಾಲ್ಗೊಂಡು ದರ್ಗಾದಲ್ಲಿ ಪೂಜೆ ಸಲ್ಲಿಸಿ ಧರ್ಮಗುರುಗಳಾದ ಸೈಯದ್ ಶಹಾ ಅತಾವುಲ್ಲಾ ಹುಸೆನಿ ಸರಮತ್ ಸಜ್ಜಾದಾನಶೀನ (ಶಮಶತ್ ಬರೇಜಾ ಬಾಬಾ) ಸರಮತ್ ಅವಂದ ಆಶೀರ್ವಾದ ಪಡೆದುಕೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಕೆಜೆಪಿ ಮುಖಂಡರಾದ ಶ್ರೀಕಾಂತಗೌಡ ಸುಬೇದಾರ, ಲಾಲ್ ಅಹ್ಮದ ಖುರೇಶಿ, ಪಿಡ್ಡಪ್ಪ ನಂದಿಕೊಲ, ಶಿವುಕುಮಾರ ಗುಂಡಾನೊರ, ಭಾಗಣ್ಣ ಹೇರುಡಿ, ಭೀಮಣ್ಣ ಮಕಾಶಿ ಮತ್ತು ಮುಂತಾದವು ಇದ್ದರು. ಮತ್ತು ಈ ಜಾತ್ರೆಯ ಸಂದರ್ಭದಲ್ಲಿ ಆಗಮಿಸಿದ ಭಕ್ತರು ಅಲ್ಲಿ ತಯಾರಿಸಿದ ವಿಶೇಷ ಸಿಹಿ ಖಾದ್ಯಗಳನ್ನು ಸವಿದರು. ಸಂಜೆ ತುಂಬಿದ ದೀಪ ವಿಕ್ಷೀಸಲು ಸುತ್ತಮುತ್ತಲಿನ ಗ್ರಾಮಗಳಿಂದ ಮತ್ತು ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ ಅಪಾರ ಭಕ್ತರು ಆಗಮಿಸಿದ್ದರು ಮತ್ತು ಖ್ಯಾತ ಖವಾಲಿ ಗಾಯಕರಾದ ರಹಿಸ್ ಅನೀಸ್ ಸಾಬ್ರಿ ಆಗಮಿಸಿ ಖವಾಲಿಯನ್ನು ಹಾಡಿದರು.

ಜೋಳದ ತೆನೆಗೆ ಅಂಟಿಕೊಂಡ ಕಾಡಿಗೆ ರೋಗ: ಆತಂಕದಲ್ಲಿ ರೈತ ಮಹಿಳೆ
ಶಹಾಪುರ: ಮತಕ್ಷೇತ್ರ ವ್ಯಾಪ್ತಿಯ ಏವೂರು ತಾಂಡಾದಲ್ಲಿ ರೈತ ಮಹಿಳೆ ರಂಗೀಬಾಯಿ ಗುಂಡು ರಾಠೋಡ ಅವರಿಗೆ ಸಂಬಂಧಿಸಿದ 1 ಎಕರೆ ಹೊಲದಲ್ಲಿನ ಜೋಳದ ಬೆಳೆಯ ತೆನೆಗೆ ಕಾಡಿಗೆ ರೋಗ ಅಂಟಿಕೊಂಡಿದ್ದು ಪ್ರತಿಶತ 25 ರಷ್ಟು ಬೆಳೆ ಹಾನಿಯಾಗುವ ಹಂತಕ್ಕೆ ತಲುಪಿದೆ. ಈ ಕುರಿತು ಮಹಿಳೆ ರಂಗೀಬಾಯಿ ರಾಠೋಡ ಹೇಳುವಂತೆ ಕೆಂಭಾವಿ ರೈತ ಸಂಪರ್ಕ ಕೇಂದ್ರದಲ್ಲಿ 120 ಕ್ಕೆ ಕೆಜಿಯಂತೆ ಬಿಳಿಜೋಳದ ಬೀಜ ಖರೀದಿಸಿದ್ದು ಬಹುಭಾಗ ತೆನೆಹಾಕುವ ಹಂತದಲ್ಲಿ ಇಂಥದೊಂದು ರೋಗದ ಹಾವಳಿ ಎದ್ದಿದ್ದು ಕಡಿಮೆ ಭೂಮಿಯಲ್ಲಿ ವರ್ಷಕ್ಕೆ ಆಗುವಷ್ಟು ಜೋಳ ಬೆಳೆಯಲು ಕಾಡಿಗೆ ರೋಗದ ಭೀತಿಯಿಂದ ತೊಂದರೆ ಅನುಭವಿಸುವಂತಾಗಿದೆ. ಕೆಂಭಾವಿ ರೈತ ಸಂಪರ್ಕದಿಂದ ಖರೀದಿಸಿದ ಜೋಳದ ಬೀಜದ ಮೇಲೆಯೆ ಅನುಮಾನ ಪಡುವಂತಾಗಿದೆ ಎಂದು ರೈತ ಮಹಿಳೆ ರಂಗೀಬಾಯಿ ಅಸಮಧಾನ ವ್ಯಕ್ತಪಡಿಸಿದ್ದಾಳೆ.

ಕೊಡಮನಹಳ್ಳಿ ಹುಲ್ಕಲ್ ರಸ್ತೆ ನಿರ್ಮಿಸಿ: ಗ್ರಾಮಸ್ಥರ ಆಗ್ರಹ
ಶಹಾಪುರ: ಗ್ರಾಮೀಣ ಭಾಗದ ರಸ್ತೆಗಾಗಿ ಸರ್ಕಾರ ವಿವಿಧ ಯೋಜನೆಗಳಲ್ಲಿ ಸಾಕಷ್ಟು ಅನುದಾನ ಅವಕಾಶ ಕಲ್ಪಿಸಿದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ತಾಲೂಕಿನ ಕೊಡಮನಹಳ್ಳಿ- ಹುಲ್ಕಲ್ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ದಿನನಿತ್ಯ ರೈತರು ಕೃಷಿ ಚಟುವಟಿಕೆಗಳಿಗಾಗಿ ಓಡಾಡುವ ಮುಖ್ಯರಸ್ತೆ ಇದಾಗಿದ್ದು, ಹುಲ್ಕಲ್ ರಾಜ್ಯ ಹೆದ್ದಾರಿಯಿಂದ ಕೊಡಮನಹಳ್ಳಿಗೆ ಹೋಗಲು ಅತ್ಯಂತ ಸಮೀಪದ ಮಾರ್ಗ ಇದಾಗಿದೆ. ಆದರೆ ಸದ್ಯ ಇರುವ ಕಚ್ಚಾರಸ್ತೆ ಮುಳ್ಳು ಕಂಟಿಯಿಂದ ಆವೃತವಾಗಿದೆ. ಇತ್ತ ಕಾಳಜಿವಹಿಸುವ ಜನಪ್ರತಿನಿಧಿಗಳು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನೆಲ್ಲೆಡೆ ಅವಶ್ಯಕತೆ ಇಲ್ಲದಲ್ಲಿ ಕಾಮಗಾರಿಗಳಿಗೆ ಯೋಜನೆ ತಯಾರು ಮಾಡುವ ಅಧಿಕಾರಿಗಳಿಗೆ ಇಂಥ ಸಂಪರ್ಕ ಕಲ್ಪಿಸುವ ರಸ್ತೆ ಕಂಡಿಲ್ಲವೆ ನಮ್ಮಹೊಲ ನಮ್ಮದಾರಿ, ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಮೂಲ ಸೌಕರ್ಯದಡಿ ಅನುದಾನ ಹೀಗೆ ಹಲವಾರು ಅನುದಾನಗಳ ಅವಕಾಶ ಬಳಸಿಕೊಂಡು ಕೊಡಮನಹಳ್ಳಿ- ಹುಲ್ಕಲ್ ರಸ್ತೆಗೆ ಶಾಶ್ವತ ಕಾಯಕಲ್ಪ ನೀಡಿ ಗ್ರಾಮಸ್ಥರಿಗೆ ಸರಾಗವಾಗಿ ಸಂಚರಿಸಲು ಅನುವು ಮಾಡಿಕೊಡಲು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದೆ.

ಹತ್ತರ ಭಯ ಹತ್ತಿರ ಬೇಡ ಕಾರ್ಯಕ್ರಮ
 ಹುಣಸಗಿ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ನಡುಕ ಶುರುವಾಗುತ್ತದೆ. ಕಾರಣ ಅಭ್ಯಾಸದ ಕೊರತೆ ಎಂದು ಎಂದು ಯುವ ಸಾಹಿತಿ ಹಾಗೂ ಯಾದಗಿರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಅಮರಯ್ಯಸ್ವಾಮಿ ಜಾಲಿಬೆಂಚಿ ಹೇಳಿದರು.  ಹುಣಸಗಿ ಸಮೀಪದ ಮುದನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಹತ್ತರ ಭಯ ಹತ್ತಿರ ಬೇಡ ಎಂಬ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿ, ಪರೀಕ್ಷೆ ಬರುತ್ತಿವೆ ಎಂದರೆ ಸಾಕು ಅನೇಕ ವಿದ್ಯಾರ್ಥಿಗಳಲ್ಲಿ ನಡುಕ ಮತ್ತು ಆತಂಕಗಳು ಆವರಿಸಿಕೊಂಡು ಪ್ರಶ್ನೆಗೆ ತಕ್ಕ ಉತ್ತರ ತಿಳಿದಿದ್ದರೂ ಭಯದಿಂದಾಗಿ ಬರೆಯಲು ಆಗದೆ ನಪಾಸು ಆಗಲು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಕ್ರೀಡಾ ಮನೋಭಾವದಿಂದ ನಗು ನಗುತ್ತ ಎದುರಿಸಲು ಸಿದ್ದರಾಗಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಧನೆ ಮಾಡಲು ಸತತ ಅಧ್ಯಯನ, ಕಠಿಣ ಪರಿಶ್ರಮ ಅವಶ್ಯವಾಗಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕ ಶಿವರಾಜ್ ಬಿರಾದಾರ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಭೀಮಣ್ಣ ಕರಡಕಲ್ ವಹಿಸಿದ್ದರು. ಎಸ್.ಎಸ್. ಪೂಜಾರಿ ನಿರೂಪಿಸಿದರು. ಸಿದ್ದಣ್ಣ ಪಡಶೆಟ್ಟಿ ಸ್ವಾಗತಿಸಿದರು. ಶಂಕರನಾಯಕ ವಂದಿಸಿದರು.

ಕನ್ನಡ ಭವನ ನಿರ್ಮಾಣಕ್ಕೆ ರು. 50 ಲಕ್ಷ ಅನುದಾನ
ಚಿತ್ತಾಪುರ: ತಾಲೂಕಿಗೆ ಕನ್ನಡ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡಲಾಗಿದೆ ಎಂದು ಸಾಹಿತ್ಯ ಸಮ್ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಅವರು ಶನಿವಾರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡುತ್ತಾ, ಕನ್ನಡ ಭಾಷೆಗೆ ಶತಮಾನಗಳ ಇತಿಹಾಸ ಇದ್ದು, ಇಂತಹ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದೆ. ಈ ಭಾಷೆಯ ವೈಶಿಷ್ಟ್ಯತೆ ಇದೆ. ಅದರೂ ಕೂಡ ನಮ್ಮ ಕನ್ನಡ ಭಾಷೆಯು ಅನ್ಯ ಭಾಷೆಗಳ ನಡುವೆ ಹೋರಾಡುವಂತಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇಂತಹ ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಹೋಗಲು ಇಲ್ಲಿ ಭವನದ ಕೊರತೆ ಕಂಡು ಬಂದ ಕಾರಣ ಇಲ್ಲಿ ಭವನ ನಿರ್ಮಾಣ ಮಾಡಲು ರು. 50 ಲಕ್ಷ ವೆಚ್ಚದಲ್ಲಿ ಭವನ ನಿರ್ಮಿಸಲಾಗುತ್ತಿದ್ದು, ಇಲ್ಲಿ ದೇಶ, ರಾಜ್ಯದ ಇತಿಹಾಸ ಸಾರುವ ಪುಸ್ತಕಗಳ ಗ್ರಂಥಾಲಯ ಹಾಗೂ ಬಡ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದು, ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವದು ಎಂದು ಹೇಳಿದರು. ಸಮ್ಮೇಳನಾಧ್ಯಕ್ಷ ರಾಜಶೇಖರ ಹತಗುಂದಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಜಿಪಂ ಅಧ್ಯಕ್ಷ ರಮೇಶ ಮರಗೋಳ, ತಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರ, ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿಸಿಎ 6ನೇ ಸೆಮಿಸ್ಟರ್ ಪ್ರವೇಶಾವಕಾಶ ಕೊಡಿ
ಗುಲ್ಬರ್ಗ: ಬಿಸಿಎ 6ನೇ ಸೆಮಿಸ್ಟರ್‌ಗೆ ಅರ್ಹತೆ ನೀಡುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಸದಸ್ಯರು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಿದರು. ಗುಲ್ಬರ್ಗ ವಿವಿ ಬಿಬಿಎಂ ಓದುತ್ತಿರುವ ವಿದ್ಯಾರ್ಥಿಗಳು 2ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿದ್ದರೂ ಅವರಿಗೆ 6ನೇ ಸೆಮಿಸ್ಟರ್ ಪ್ರವೇಶ ನೀಡಲಾಗುತ್ತಿದೆ. ಆದರೆ ಬಿಸಿಎ ವಿದ್ಯಾರ್ಥಿಗಳು 1ನೇ ಮತ್ತು 2ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದರೆ 6ನೇ ಸೆಮಿಸ್ಟರ್‌ನಲ್ಲಿ ಓದಲು ಅವಕಾಶ ನೀಡುತ್ತಿಲ್ಲ. ಇದು ವಿದ್ಯಾರ್ಥಿಗಳ ನಡುವಿನ ತಾರತಮ್ಯ ಎಂದು ಎನ್‌ಎಸ್‌ಯುಐ ಸದಸ್ಯರು ದೂರಿದ್ದಾರೆ. ಗುಲ್ಬರ್ಗ ವಿವಿಯ ಅವೈಜ್ಞಾನಿಕ ನೀತಿ ನಿಯಮಗಳಿಂದಾಗಿ ಹಲವಾರು ವಿದ್ಯಾರ್ಥಿಗಳು 6ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಅವರ ಶೈಕ್ಷಣಿಕ ಭವಿಷ್ಯ ಕತ್ತಲೆಯಲ್ಲಿದೆ ಎಂದು ಅವರು ಅಳಲು ತೋಡಿಕೊಂಡರು. ಮುಗ್ಧ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯ ಸರಿಪಡಿಸಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಸಮಾನ ಪ್ರವೇಶಾತಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಪ್ರಶಾಂತ ಪಾಟೀಲ್ ಮನವಿ ಮಾಡಿದರು. ವಿವಿಧ ಕಾಲೇಜುಗಳಲ್ಲಿ ಬಿಸಿಎ ತೃತೀಯ ವರ್ಷ ಅಭ್ಯಾಸ ಮಾಡುತ್ತಿರುವ 6ನೇ ಸೆಮಿಸ್ಟರ್ ಅವಕಾಶ ವಂಚಿತರಾಗಿರುವ ಹಲವಾರು ವಿದ್ಯಾರ್ಥಿಗಳು ತಮಗಾಗುತ್ತಿರುವ ಅನ್ಯಾಯವನ್ನು ಕುಲಸಚಿವರ ಎದುರು ತೋಡಿಕೊಂಡರು. ಈ ಸಂದರ್ಭದಲ್ಲಿ ಮಹೇಂದ್ರ ಕೊಳ್ಳೂರ, ಸಿದ್ಧಾರ್ಥ ರಂಗನೂರ, ವಿಶಾಲ ಪಾಟೀಲ್, ಭವಾನಿ ದರ್ಗಿ, ಜಾವೀದ್ ಹಸನ್, ರಾಕೇಶ ದೇಸಾಯಿ ಸೇರಿದಂತೆ ಮತ್ತಿತರರು ಇದ್ದರು.

ತಾಯಿ, ಶಿಶು ಮರಣ ತಡೆಗೆ ಆಶಾ ದಿನಚರಿ ಸಹಕಾರಿ: ಡಾ. ಹಬೀಬ್
ಸೇಡಂ: ಆಶಾ ದಿನಚರಿ ಸದುಪಯೋಗ ಪಡೆಯುವುದರಿಂದ ತಾಯಿ ಹಾಗೂ ಶಿಶು ಮರಣ ಪ್ರಮಾಣ ತಡೆಯಬಹುದು ಎಂದು ಸೇಡಂ ತಾಲೂಕಾ ಆರೋಗ್ಯಾಧಿಕಾರಿ ಡಾ. ಹಬೀಬ್ ಉಸ್ಮಾನ್ ಹೇಳಿದರು. ಸೇಡಂನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆಶಾ ಕಾರ್ಯಕರ್ತೆರಿಗೆ ಹೊಸದಾಗಿ ದಿನಚರಿ ಪುಸ್ತಕ ವಿತರಣೆ ಮಾಡುತ್ತಿದ್ದು, ಇದರಲ್ಲಿ ಆಶಾ ತನ್ನ ಕಾರ್ಯವ್ಯಾಪ್ತಿಯಲ್ಲಿ ನೀಡಬೇಕಾದ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮಾಸಿಕ ಕ್ರಿಯಾಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು. ಇಲಾಖೆ ವತಿಯಿಂದ ನೀಡುತ್ತಿರುವ ಹೊಸ ದಿನಚರಿ ಪುಸ್ತಕವನ್ನು ಹೇಗೆ ಬರೆಯಬೇಕೆಂದು ಕೆಎಚ್‌ಪಿಟಿಯ ಸುಕ್ಷೇಮ ಯೋಜನೆಯ ಜಿಲ್ಲಾ ಸಮುದಾಯ ಮಾರ್ಗದರ್ಶಕ ಪ್ರಮೋದಕುಮಾರ, ತಾಲೂಕು ಸಮುದಾಯ ಸಂಯೋಜಕ ಆನಂದ ಮನ್ನೆ ಎರಡು ದಿನಗಳ ಕಾಲ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿದರು. ಈ ವೇಳೆ ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಶಂಕರ ಬಿರಾದಾರ, ಆಡಳಿತ ವೈದ್ಯಾಧಿಕಾರಿ ಡಾ. ಸರಯೂ ಹೊಸೂರ, ಡಾ. ರಾಜಶೇಖರ ಮಾಲಿ, ಬಸವರಾಜ ಬೆಡಪಳ್ಳಿ, ಎಲ್‌ಎಚ್‌ಯು ಲಕ್ಷ್ಮಿದೇವಿ, ಬಿಪಿಎಂ ರವಿ ಪಾಟೀಲ, ಆಶಾಮೆಂಟರ್ ಸಂಪತ್‌ಕುಮಾರ ಸೇರಿದಂತೆ ಇನ್ನಿತರ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

ಮಧ್ಯಸ್ಥಿಕೆ ವಿಶ್ವದಲ್ಲಿ ಜನಪ್ರಿಯ: ನ್ಯಾ. ಶಾಂತಗೌಡರ
ಗುಲ್ಬರ್ಗ: ನ್ಯಾಯಾಲಯಗಳಲ್ಲಿ ದಾಖಲಾಗುವ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ವಕೀಲರನ್ನು ಮಧ್ಯಸ್ಥಿಕೆ ಪ್ರಕ್ರಿಯೆಗೆ ಒಳಪಡಿಸಿ ಹೈಕೋರ್ಟ್ ವ್ಯಾಜ್ಯಗಳನ್ನು ಬಗೆಹರಿಸುತ್ತಿದೆ. ಇದರಿಂದ ಮಧ್ಯಸ್ಥಿಕೆಯು ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಹಾಗೂ ಗುಲ್ಬರ್ಗ ಆಡಳಿತಾತ್ಮಕ ನ್ಯಾಯಧೀಶ ನ್ಯಾಯಮೂರ್ತಿ ಮೋಹನ್ ಶಾಂತಗೌಡರ ತಿಳಿಸಿದರು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಹಾಗೂ ಗುಲ್ಬರ್ಗ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಸಹಯೋಗದಲ್ಲಿ ಗುಲ್ಬರ್ಗದ ಕರ್ನಾಟಕ ಹೈಕೋರ್ಟಿನ ಕ್ಲಬ್ ಹೌಸ್‌ನಲ್ಲಿ ವಕೀಲರಿಗೆ ಆಯೋಜಿಸಿದ 5 ದಿನಗಳ ಮಧ್ಯಸ್ಥಿಕೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರಿ ಬೇಡಿಕೆ: ರಾಜ್ಯದಲ್ಲಿ ಮಧ್ಯಸ್ಥಿಕೆ ತರಬೇತಿ ಪಡೆದ ಸುಮಾರು 2,300 ವಕೀಲರು ಹಾಗೂ 6 ಜನ ಮಧ್ಯಸ್ಥಿಕೆ ತರಬೇತಿ ನೀಡುವ ಮುಖ್ಯ ತರಬೇತುದಾರರಿದ್ದಾರೆ. ಇಂಥಹ ತರಬೇತುದಾರರಿಗೆ ಹೊರ ದೇಶಗಳಲ್ಲಿ ಒಳ್ಳೆಯ ಬೇಡಿಕೆ ಇದೆ ಎಂದರು. ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆಯಿಂದ ಬಗೆಹರಿಸುವ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ವರ್ಗಾಯಿಸಬೇಕು. ಇದರಿಂದ ಕಕ್ಷಿದಾರರು ನ್ಯಾಯಾಲಯಗಳಿಗೆ ಹಾಗೂ ವಕೀಲರಿಗೆ ಪಾವತಿಸಬೇಕಾದ ಖರ್ಚು ಉಳಿಯುತ್ತದೆ. ಮಧ್ಯಸ್ಥಿಕೆಯಿಂದ ವ್ಯಾಜ್ಯಗಳನ್ನು ಬಗೆಹರಿಸುವುದರಿಂದ ಇಬ್ಬರೂ ಕಕ್ಷಿದಾರರು ವ್ಯಾಜ್ಯದಲ್ಲೂ ಜಯ ಗಳಿಸುತ್ತಾರೆ. ಇದರಿಂದ ಕಕ್ಷಿದಾರರಿಗೆ ಸಮರ್ಪಕ ನ್ಯಾಯ ದೊರೆತಂತಾಗಿ ಪರಿಹಾರವೂ ಲಭಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೈಕೋರ್ಟ್ ನ್ಯಾಯಾಧೀಶ ಬಿ.ವಿ. ಪಿಂಟೋ, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಮುಖ್ಯ ತರಬೇತುದಾರ ಎಸ್.ಸುಶೀಲಾ ಮತ್ತಿತರರು ಪಾಲ್ಗೊಂಡಿದ್ದರು. ವಿಶ್ವವನಾಥ ವಿ.ಅಂಗಡಿ ಸ್ವಾಗತಿಸಿದರು. ನ್ಯಾಯಮೂರ್ತಿ ಡಿ.ಆರ್. ವೆಂಕಟ ಸುದರ್ಶನ ವಂದಿಸಿದರು. ಕೆ. ಪದ್ಮಾ ಕಾರ್ಯಕ್ರಮ ನಿರೂಪಿಸಿದರು.

ಉನ್ನತ ವ್ಯಾಸಂಗ ಸಾಲ ದುಪ್ಪಟ್ಟು; ಪಾಲಕರ ಕಂಗಾಲು
ಗುಲ್ಬರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2008-09ರಲ್ಲಿ ಬಜೆಟ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು  ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಪಡೆದರೆ, ಸಾಲದ ಬಡ್ಡಿಯನ್ನು ಕೇಂದ್ರ ಭರಿಸುವುದಾಗಿ ಹೇಳಿತ್ತು. ಆದರೆ ಆ ಭರವಸೆ ಈಡೇರಿಲ್ಲ. ಈ ಮಧ್ಯೆ ಬ್ಯಾಂಕ್ ತಕ್ಷಣ ಪಡೆದ ಸಾಲ, ಬಡ್ಡಿ ಸೇರಿ ಡಬಲ್ ಆಗಿದ್ದು, ತಕ್ಷಣ ಮರುಪಾವತಿಸುವಂತೆ ಬ್ಯಾಂಕ್‌ಗಳಿಂದ ನೋಟಿಸ್ ಬರುತ್ತಿರುವುದು ಪಾಲಕರನ್ನು ತೀವ್ರ ಚಿಂತೆಗೀಡು ಮಾಡಿದೆ ಎಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಹೇಳಿದರು.ರಾಜ್ಯ ಸರ್ಕಾರ ಕೂಡ 2008ರ  ಬಜೆಟ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶೇ. 6ರ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಹೇಳಿ 6 ವರ್ಷವಾದರೂ ಇಲ್ಲಿಯವರೆಗೆ ತುಂಬಿಲ್ಲ. ಬಜೆಟ್‌ನಲ್ಲಿ ಘೋಷಿಸಿದ್ದರಿಂದ ಸಾವಿರಾರು ಪಾಲಕರು ಮತ್ತು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರಗಳು ಬಡ್ಡಿ ತುಂಬುತ್ತವೆ ಎಂಬ ನಂಬಿಕೆಯಿಂದ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಅನುಸರಿಸುತ್ತಿರುವ ಮೊಂಡು ನೀತಿಯಿಂದ ಪಾಲಕರು ಮತ್ತು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಸರ್ಕಾರಗಳು ಬಡ್ಡಿ ತುಂಬದೆ ಇರುವುದರಿಂದ, ಬ್ಯಾಂಕ್‌ಗಳು ಪಾಲಕರಿಗೆ ಶೇ. 13ರಿಂದ 15ರವರೆಗೆ ಬಡ್ಡಿಯನ್ನು ಪಡೆದ ಸಾಲಕ್ಕೆ ಸೇರಿಸಿದ ಪ್ರಯುಕ್ತ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೊತ್ತ 2-3 ಪಟ್ಟು ಹೆಚ್ಚಾಗಿದೆ. ಸಾಲ ಮರುಪಾವತಿಸುಂತೆ ಬ್ಯಾಂಕ್‌ಗಳು ಒತ್ತಾಯಿಸುತ್ತಿವೆ. ಕೆಲವರ ಮನೆಗೆ ನೋಟಿಸ್ ಕಳುಹಿಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ದ್ವಂದ್ವ ಧೋರಣೆಯಿಂದ ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಎಂ.ಬಿ. ಅಂಬಲಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಾನವ ಕಲ್ಯಾಣಕ್ಕೆ ನಾಲವಾರ ಮಠ ಶ್ರಮ: ಶಾಸಕ
ಗುಲ್ಬರ್ಗ: ಆಧುನಿಕ ಭರಾಟೆಯಲ್ಲಿ ಮಾನಸಿಕ ನೆಮ್ಮದಿ ಕಳೆದುಕೊಂಡಿರುವ ಮಾನವನ ಮನಸ್ಸಿಗೆ ಶಾಂತಿ, ಸಮಾಧಾನ, ಸೌಹಾರ್ದತೆ ಕುರಿತು ಬೋಧನೆ ನೀಡುವ ಮೂಲಕ ಮಾನವ ಕಲ್ಯಾಣಕ್ಕೆ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ನಿರಂತರ ಶ್ರಮಿಸುತ್ತಿದೆ ಎಂದು ಶಾಸಕ ಡಾ. ಮಾಲಕರೆಡ್ಡಿ ಅಭಿಪ್ರಾಯಪಟ್ಟರು. ನಾಲವಾರ ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶ್ರೀಮಠದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ನಾಲವಾರ ಜಾತ್ರೆ ನಾಡಿಗೆ ಪ್ರಸಿದ್ಧವಾಗಿದೆ. ಈ ಮೂಲಕ ಇಲ್ಲಿಗೆ ಬರುವ ಲಕ್ಷಾಂತರ ಜನರಿಗೆ ಮಾನವೀಯ ಮೌಲ್ಯಗಳ ಕುರಿತು ಮತ್ತು ಜೀವನಕ್ಕೆ ಅಗತ್ಯವಾಗಿ ಬೇಕಾದ ತತ್ವಗಳ ಕುರಿತು ಬೋಧಿಸುತ್ತಿದ್ದಾರೆ ಎಂದರು. ಮಠಾಧೀಶ ಡಾ. ಸಿದ್ದತೋಟೆಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಭಾಪತಿ ಚಂದ್ರಶೇಖರ ರೆಡ್ಡಿ, ಮದನ್ ದೇಶಮುಖ, ಲಿಂಗಾರೆಡ್ಡಿ ಭಾಸರೆಡ್ಡಿ, ಗೋಪಾಲ ರಾಠೋಡ, ಶಾಂತಗೌಡ ಅಲ್ಲೂರ ಸೇರಿದಂತೆ ಇನ್ನಿತರರು ಇದ್ದರು. ಡಾ. ಸಿದ್ದರಾಜ ರೆಡ್ಡಿ ನಿರೂಪಿಸಿದರು. ವಿರೂಪಾಕ್ಷಪ್ಪ ಸ್ವಾಮಿ ವಂದಿಸಿದರು.

ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸುವ ಗುರಿ: ಶಾಸಕ
ಅಫಜಲ್ಪುರ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸ್ನೇಹಿಯಾಗಿ ಇದುವರೆಗೂ ಸಾಕಷ್ಟು ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಶಾಸಕ ಮಾಲಿಕಯ್ಯ ಗುತ್ತೇದಾರ ಹೇಳಿದರು. ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಅಫಜಲ್ಪುರ- ಕುರ್ಲಾ ನೂತನ ಬಸ್‌ಗೆ ಚಾಲನೆ ನೀಡಿ ಮಾತನಾಡಿ, ಈ ಬಸ್ ಅಫಜಲ್ಪುರದಿಂದ ಮ. 3.15ಕ್ಕೆ ಗುಲ್ಬರ್ಗಕ್ಕೆ ಹೊರಟು ಅಲ್ಲಿಂದ 5.15ಕ್ಕೆ ಮತ್ತೆ ದೇವಲಗಾಣಗಾಪುರ, ತೆಲ್ಲೂರ, ಆನೂರ, ಅಫಜಲ್ಪುರ, ಕರ್ಜಗಿ, ಇಂಡಿ, ಸೊಲ್ಲಾಪುರ ಮಾರ್ಗವಾಗಿ ಕುರ್ಲಾ ತಲುಪುತ್ತದೆ. ಇದರ ಸದುಪಯೋಗವನ್ನು ಪ್ರಯಾಣಿಕರು ಪಡೆಯಬೇಕು. ಅಫಜಲ್ಪುರದಿಂದ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಇತರ ನಗರಗಳಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಫಜಲ್ಪುರ ಘಟಕದಿಂದ ನೂತನ ಬಸ್‌ಗಳಿಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿಭಾಗಿಯ ನಿಯಂತ್ರಣಾಧಿಕಾರಿ ಇನಾಯತ್ ಭಾಗವಾನ್, ವಿಭಾಗಿಯ ಸಂಚಾರಿ ಅಧಿಕಾರಿ ಎಸ್.ಆರ್ ಕುಲಕರ್ಣಿ, ಅಫಜಲ್ಪುರ ಘಟಕದ ವ್ಯವಸ್ಥಾಪಕ ಶೇಷಮೂರ್ತಿ, ಬಿ.ವೈ. ಪಾಟೀಲ್, ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ, ರಝಾಕ ಪಟೇಲ್, ಶಾಂತಯ್ಯ ಹಿರೇಮಠ, ಪಾಶಾ ಮಣೂರ, ರಾಜಶೇಖರ ಹಿರೇಮಠ, ಧನರಾಜ ಮಿರಜಕರ ಸೇರಿದಂತೆ ಇತರರು ಇದ್ದರು.

ರಾಜ್ಯ ಸರ್ಕಾರ ಕ್ರಮ ಖಂಡಿಸಿ ಕರವೇ ಪ್ರತಿಭಟನೆ
ಯಾದಗಿರಿ: ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡಿದ ಬೆಳಗಾವಿ ಎಂ.ಇ.ಎಸ್. ಶಾಸಕ ನಾಡದ್ರೋಹಿ ಸಂಭಾಜಿ ಪಾಟೀಲರ್ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ಕರವೇ ಜಿಲ್ಲಾ ಘಟಕ ವತಿಯಿಂದ ನಗರದ ಶಾಸ್ತ್ರೀ ವೃತ್ತದಲ್ಲಿ ಶಾಸಕ ಸಂಭಾಜಿ ಪಾಟೀಲ್ರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡುವುದರ ಮೂಲಕ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ಟಿ.ಎನ್. ಭೀಮುನಾಯಕ, ನಾಡದ್ರೋಹಿ ಶಾಸಕ ಸಂಭಾಜಿ ಪಾಟೀಲ್ ಕನ್ನಡದ ನೆಲದಲ್ಲಿ ಅನ್ನ ತಿಂದು, ಅಧಿಕಾರ ಅನುಭವಿಸಿ ಪವಿತ್ರ ಕನ್ನಡ ನಾಡಿನಲ್ಲಿ ಜೂಜು ಅಡ್ಡೆ, ಮಟ್ಕ ದಂದೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದರು. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವದು ಸಂಭಾಜಿ ಪಾಟೀಲರ್‌ಗೆ ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಕನ್ನಡಿಗರಿಗೆ ಅವಮಾನ: ಕಳೆದ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮರಾಠಿಯಲ್ಲಿ ಭಾಷಣ ಮಾಡಿ ಕನ್ನಡಿಗರಿಗೆ ಅವಮಾನ ಮಾಡಿರುವುದು, ಎಂ.ಇ.ಎಸ್. ಮಹಾಮೇಳದಲ್ಲಿ ರಾಜ್ಯ ಸರ್ಕಾರದ ಬಗ್ಗೆ ಕೀಳಾಗಿ ಮಾತನಾಡಿದ್ದರು ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸದೇ ಇರುವುದನ್ನು ಕರವೇ ರಾಜ್ಯಾದ್ಯಂತ ಖಂಡಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ಸಂಭಾಜಿ ಪಾಟೀಲ್‌ರ ವಿಧಾನಸಭೆ ಸದಸ್ಯತ್ವ ರದ್ದು ಮಾಡಬೇಕು. ಇವರನ್ನು ರಾಜ್ಯದಿಂದ ಗಡಿಪಾರು ಮಾಡಿ, ಅವರು ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಬಂದ್ ಮಾಡಿ ಕ್ರೀಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅರ್ಜುನ್ ಪವಾರ್, ಶರಣಪ್ಪ ಜಾಕನಳ್ಳಿ, ಮಲ್ಲು ವರ್ಕನಳ್ಳಿ, ಹಣಮಂತನಾಯಕ ಖಾನಳ್ಳಿ, ಶೀವುಕುಮಾರ ಕಾನಗಡ್ಡ, ದೇವು ಪೂಜಾರಿ, ನಾಗರಾಜ ಶೆಟ್ಟಿಕೇರಾ, ಸಿದ್ದು ನಾಯಕ, ಸಿದ್ದಪ್ಪ ಕ್ಯಾಸಪನಳ್ಳಿ,ನಾಗಪ್ಪ ದೇಸಾಯಿ, ಸಾಹೇಬಗೌಡ ಗೌಡಿಗೇರಾ, ಬಸವರಾಜನಾಯಕ ಸೈದಾಪುರ, ರಾಜು ಪಗಲಾಪುರ, ಶರಣು ಗುತ್ತೆದಾರ, ಅಬ್ದುಲ್ ಜಗಾನೂರ, ಶ್ರೀನಿವಾಸ ಚಾಮನಳ್ಳಿ, ವಿನೋದ ರಾಠೋಡ, ದಶರಥ ರಾಠೋಡ, ನಾಗರಾಜ ಠಾಣಗುಂದಿ, ಗೋಪಾಲ್ ರಠೋಡ, ನಾಗಪ್ಪ ವರ್ಕನಳ್ಳಿ, ಮಾರುತಿ ನಾಯಕ, ರವಿ ನಾಯಕ, ಬಸವರಾಜ ನಾಯಕ, ಹಾಗೂ ನೂರಾರು ಕರವೇ ಕಾರ್ಯಕರ್ತರು ಹಾಜರಿದ್ದರು.

ರಕ್ತನಿಧಿ ಸಂಗ್ರಹಣಾ ಕೇಂದ್ರ ಆರಂಭಿಸಲು ಶಾಸಕರ ಸೂಚನೆ
ಸುರಪುರ: ಇಲ್ಲಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ರಕ್ತನಿಧಿ ಸಂಗ್ರಹಣಾ ಕೇಂದ್ರ ಆರಂಭಿಸಬೇಕೆಂದು ಶಾಸಕ ರಾಜಾ ವೆಂಕಟಪ್ಪ ನಾಯಕ ವೈದ್ಯರಿಗೆ ಸೂಚನೆ ನೀಡಿದರು. ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಆರೋಗ್ಯ ರಕ್ಷಾ ಸಮಿತಿ ಸಭೆ ನಂತರ ಆಸ್ಪತ್ರೆಯನ್ನು ಪರಿಶೀಲಿಸಿ ವೈದ್ಯರೊಂದಿಗೆ ಔಷಧಿ ದಾಸ್ತಾನು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಸಮಾಲೋಚನೆ ನಡೆಸಿದರು. ರಕ್ತನಿಧಿ ಸಂಗ್ರಹಣಾ ಕೇಂದ್ರಕ್ಕೆ ಸಂಬಂಧಿಸಿದಂತೆ ಎಲ್ಲ ಉಪಕರಣಗಳು ಇನ್ನಿತರ ವಸ್ತುಗಳು ಲಭ್ಯವಿದ್ದು, ಮೇಲಾಧಿಕಾರಿಗಳ ಅನುಮತಿ ಪಡೆಯಬೇಕೆಂದು ವೈದ್ಯರು ತಿಳಿಸಿದಾಗ ತಕ್ಷಣ ಪರವಾನಗಿ ಪಡೆದು ಕೇಂದ್ರ ಆರಂಭಿಸುವಂತೆ ಸಲಹೆ ನೀಡಿದರು. ಆಸ್ಪತ್ರೆಯ ಎಲ್ಲ ವಾರ್ಡ್‌ಗಳಿಗೆ ಭೇಟಿ ಕೊಟ್ಟು ಸ್ವಚ್ಛತೆ ಕಾಪಾಡಿಕೊಂಡು ಹೋಗುವಂತೆ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಹಲವಾರು ರೋಗಿಗಳು ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಶಾಸಕರು ಪುರಸಭೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಯನ್ನು ಕರೆಯಿಸಿ ಬೋರವೆಲ್ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ವೈದ್ಯರ ಕೊರತೆಯಿದ್ದಲ್ಲಿ ಎನ್‌ಆರ್‌ಎಚ್‌ಎಂ ನಲ್ಲಿ ನೇಮಕ ಮಾಡಿಕೊಳ್ಳುವಂತೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಸಹಕರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗನಾಥ ಹೆಬ್ಳೆ, ಡಾ. ವಿ.ಎಲ್. ಚೌದರಿ, ಡಾ. ಹರ್ಷವರ್ಧನ ರಫಗಾರ್, ಮುಖಂಡರಾದ ಸೂಲಪ್ಪ ಕಮತಗಿ, ವೆಂಕೋಬ್ ಬೆಂಗಳೂರು ಇನ್ನಿತರರಿದ್ದರು.

ಕಲಂ 371(ಜೆ) ಜಾರಿಯಿಂದ ಹೈ.ಕ. ಅಭಿವೃದ್ಧಿ: ಸಚಿವ
ಚಿತ್ತಾಪುರ: ತಾಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಜಿಲ್ಲಾ ಸಮ್ಮೇಳನವನ್ನು ಮೀರಿಸುವಂತಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲೂ ಇಂತಹ ಕನ್ನಡ ಬೆಳೆಸುವ ಕಾರ್ಯಕ್ರಮಗಳು ಜರುಗಿದರೆ ಸಾಹಿತ್ಯಿಕವಾಗಿ ಕನ್ನಡ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿಜ್ಞಾನೇಶ್ವರ ಪ್ರಧಾನ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪಿಸುವುದು ಸರ್ಕಾರದ ಯೋಜನೆಯಾಗಿದೆ ಎಂದು ಹೇಳಿದರು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ಜಾರಿಯಾಗಿರುವುದರಿಂದ ಈ ಭಾಗಕ್ಕೆ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವಾರು ಪ್ರಯೋಜನಗಳು ಲಭಿಸಲಿವೆ ಎಂದರು. ಕೋರಿ ಸಿದ್ದೇಶ್ವರ ಮಠ ನಾಲವಾರ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ, ಕಂಬಳೇಶ್ವರಮಠ ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಮ್ಮೇಳನಾಧ್ಯಕ್ಷ ರಾಜಶೇಖರ ಹತಗುಂದಿ, ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ, ಜಿಪಂ ಅಧ್ಯಕ್ಷ ರಮೇಶ ಮರಗೋಳ, ತಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರ, ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ತಾಲೂಕಾಧ್ಯಕ್ಷ ನಾಗಾಯ್ಯ ಸ್ವಾಮಿ ಅಲ್ಲೂರ, ಶಿವಾರಾವ ಪಾಟೀಲ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com