ವರುಣನ ಮುನಿಸಿಗೆ ರೈತ ಹತಾಶ

Updated on: 

 ಮಂಜುನಾಥ ಸ್ವಾಮಿ
ಯಾದಗಿರಿ: 'ಆಗಾ ಅಲ್ನೋಡ್ರಿ, ಆ ದಂಡಿಯಿಂದ ಈ ದಂಡಿವರಿಗೂ ಇದ್ದೆಲ್ಲ ಬಿತ್ತದಾಗ್ಯಾರಿ, ಆದರೆ ಮಳೀನೇ ಬರಲಾಗ್ಯಾದ್ರಿ. ಯಾನ್ ಮಾಡುದು ಹೇಳ್ರೀ. ಸಾಲ ಮಾಡಿ ಬೀಜ ಗೊಬ್ಬರ ತಂದ್ ಬಿತ್ತೀವ್ರೀ...'
- ಹೀಗೆಂದು ವರಣದೇವನ ಅವಕೃಪೆಗೆ ಒಳಗಾಗಿ ತತ್ತರಿಸಿ ಹತಾಷರಾಗಿರುವ ಜಿಲ್ಲೆಯ ರೈತರು ತಮ್ಮ ತಮ್ಮ ಹೊಲದತ್ತ ಕೈ ತೋರಿಸುತ್ತಾರೆ.
ಜಿಲ್ಲೆಯ ಗ್ರಾಮಗಳಿಗೆ ಕೃಷಿ ಇಲಾಖೆ ಸಂಬಂಧಿ ಅಧಿಕಾರಿಗಳು, ಟೀವಿಯವರು ಆಗಮಿಸುವುದೇ ತಡ. ಅಲ್ಲಿ ಜನ ಜಾತ್ರೆ. ಇವರಿಂದಾದರೂ ನಮಗೆ ನೆರವು ಸಿಕ್ಕೀತೆಂಬ ಆಸೆಯಿಂದ ವಾಹನಗಳ ಸುತ್ತಮುತ್ತ ಜನ ಮುಗಿಬೀಳುತ್ತಾರೆ. ಬಂದವರು ಸಮಸ್ಯೆ ಕೇಳಲಿ ಅಥವಾ ಬಿಡಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಮಳೆಯ ಅಭಾವವಿದ್ದರೂ ರೈತರು ಬಿತ್ತನೆ ಮಾಡಿ ಹತಾಶರಾಗಿದ್ದಾರೆ. ಭೂಮಿಯನ್ನು ನಂಬಿದವನ ತುತ್ತಿಗೆ ಬರವಿಲ್ಲ ಎಂಬ ಗಾದೆ ಮಾತು ಎರಡ್ಮೂರು ವರ್ಷಗಳಿಂದ ಸುಳ್ಳಾಗುತ್ತಿದೆ. ಅನ್ನದಾತನಿಗೇ ಅನ್ನದ ಕೊರತೆ ಎದುರಾಗುವ ಭೀತಿ ಶುರುವಾಗಿದೆ.
'ಇರುವ ಎರಡು ಎಕರೆ ಹೊಲದಲ್ಲಿ ಹೆಸರು ಬಿತ್ತಿದ್ದಿನ್ರಿ, ಈಗಾಗಲೇ ಎಣ್ಣೆ, ಬೀಜ ಖರೀದಿ ಮತ್ತ ಗೊಬ್ಬರಕ್ಕಾಗಿ ಸುಮಾರು 10,000 ಖರ್ಚು ಮಾಡೀನ್ರಿ. ಹೊಲದಾಗ ಮನಸ ಬರವಲ್ದು, ಅಲ್ಲಿ ಕಾಲು ನಿಲ್ಲಾವಲ್ದು, ಮನ್ಯಾಗ ಹೆಂಡತಿ ಮೂವರು ಮಕ್ಳು ಅದಾರ. ಅವರಿಗೆಲ್ಲ ಹ್ಯಾಂಗ್ ತಂದ್‌ಹಾಕಬೇಕು ಅನ್ನೋದಾ ದೊಡ್ಡ ಚಿಂತ್ಯಾಗ್ಯಾದ' ಎನ್ನುತ್ತಾರೆ ರೈತ ಮಲ್ಲಯ್ಯ ಹಾಲಗೇರಾ.
ಎಲ್ಲೆಲ್ಲಿ ಮಳೆ ಅಭಾವ?: ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದೆ ಯಾದಗಿರಿ ತಾಲೂಕಿನ ಮುದ್ನಾಳ, ರಾಣಾಗುಂದಿ, ಹತ್ತಿಕುಣಿ, ರಾಮಸಮುದ್ರ, ಮೈಲಾಪುರ, ಮೂಷ್ಟೂರ್, ಶಹಾಪುರ ತಾಲೂಕಿನಲ್ಲಿ ಹಾಲಗೇರಾ, ದೋರನಳ್ಳಿ, ವಡಗೇರಾ, ಸಗರ, ಹಯ್ಯಾಳ, ಬೆಂಡೆಗಂಬಳಿ, ಸುರಪುರ ತಾಲೂಕಿನಲ್ಲಿ ಕೆಂಭಾವಿ, ಏವೂರ, ಕಕ್ಕೇರಾ ಅಲ್ಲದೆ ಜಿಲ್ಲೆಯ ಇನ್ನೂ ಅನೇಕ ಗ್ರಾಮಗಳಲ್ಲಿ ಮಳೆ ಬಾರದೇ ರೈತರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.
ಮಳೆ ವಿವರ: ಜನವರಿಯಿಂದ ಜೂನ್ ಅಂತ್ಯದವರೆಗೆ ವಾಡಿಕೆ ಮಳೆ 562 ಮಿಮೀ ಇದ್ದು, 449.8 ಮಿಮೀ ಸುರಿದಿದ್ದು, 112.2 ಮಿಮೀ ಕೊರತೆಯಾಗಿದೆ. ಜೂನ್‌ನಲ್ಲಿ ಸಾಮಾನ್ಯ ಮಳೆ 117.0 ಮಿಮೀ ಇದ್ದು 21.5 ಮಿಮೀ ಮಳೆಯಾಗಿದೆ. ಜೂನ್ ತಿಂಗಳ ಸರಾಸರಿ ಮಳೆಗೆ ಹೋಲಿಸಿದರೆ 95.5 ಮಿಮೀ ಕಡಿಮೆ. ಆದ್ದರಿಂದ ಜಿಲ್ಲೆಯಲ್ಲಿ ಮುಂಗಾರು ಬೆಳೆಗಳ ಬಿತ್ತನೆ ಕುಂಠಿತವಾಗಿದೆ.
ಹೆಸರು ಬೆಳೆ ಮೊಳಕೆಯಿಂದ ಬೆಳವಣಿಗೆ ಹಂತದಲ್ಲಿವೆ. ಸಜ್ಜೆ, ತೊಗರಿ, ಸೂರ್ಯಕಾಂತಿ ಮತ್ತು ಹತ್ತಿ ಬೀಜಗಳು ಮೊಳಕೆ ಹಂತದಲ್ಲಿವೆ. ಜೂನ್ ತಿಂಗಳ ಮಳೆ ಕೊರತೆಯಿಂದ ಎಲ್ಲ ಬೆಳೆಗಳಿಗೆ ತೇವಾಂಶದ ಕೊರತೆ ಕಂಡುಬಂದಿದೆ.
ಬಿತ್ತನೆ ವಿವರ: ಮುಂಗಾರು ಹಂಗಾಮಿಗೆ ಒಟ್ಟು 2,69,162 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈ ಪೈಕಿ 7,847 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅಂದರೆ ಶೇ.2.9ರಷ್ಟು ಮಾತ್ರ ಬಿತ್ತನೆಯಾಗಿದೆ. 2014ರ ಮುಂಗಾರು ಹಂಗಾಮಿನಲ್ಲಿ ಏಕದಳ, ದ್ವಿದಳಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಗಳ ಬೀಜವು ಒಟ್ಟಾರೆ 23,235 ಕ್ವಿಂಟಲ್ ಬೇಡಿಕೆಯಿದ್ದು, 24,155 ಕ್ವಿಂಟಲ್ ದಾಸ್ತಾನು ಮಾಡಲು ಕ್ರಮ ಜರುಗಿಸಲಾಗಿದೆ.
ಅದರಂತೆ 16,400 ಮೆಟ್ರಿಕ್ ಟನ್ ಡಿಎಪಿ, 26,600 ಮೆಟ್ರಿಕ್ ಟನ್ ಯೂರಿಯಾ, 3,200 ಮೆಟ್ರಿಕ್ ಟನ್ ಎಂಒಪಿ ಮತ್ತು 12,500 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಸೇರಿ ಒಟ್ಟು 59,170 ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರಗಳ ಬೇಡಿಕೆಯಿದ್ದು, ಒಟ್ಟು 11,876.55 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ.
118 ಹುದ್ದೆ ಖಾಲಿ: ಜಿಲ್ಲೆಯಲ್ಲಿ ಒಟ್ಟು 16 ರೈತ ಸಂಪರ್ಕ ಕೇಂದ್ರಗಳು, 3 ತಾಲೂಕು ಕೇಂದ್ರಗಳು  ಕಾರ್ಯನಿರ್ವಹಿಸುತ್ತಿವೆ. ಜಂಟಿ ಕೃಷಿ ನಿರ್ದೇಶಕರ ಕಚೇರಿ ಸೇರಿ ಎಲ್ಲ ಕಚೇರಿಗಳಲ್ಲಿ ಒಟ್ಟು 186 ಹುದ್ದೆಗಳು ಮಂಜೂರಾಗಿದ್ದು, 68 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 118 ಹುದ್ದೆ ಖಾಲಿ ಇರುವುದರಿಂದ ಕೃಷಿ ಕಾರ್ಯಕ್ರಮಗಳಿಗೆ ಅಥವಾ ಇನ್ನಿತರ ತರಬೇತಿ ಕಾರ್ಯಕ್ರಮಗಳಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಘೋಷಣೆಗೆ ಆಗ್ರಹ
ಯಾದಗಿರಿ: ಹೈ-ಕ ಭಾಗದ ಪ್ರದೇಶವನ್ನು ಬರಗಾಲ ಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಜಿಲ್ಲಾ ಟೋಕರಿ ಕೊಲಿ ಸಮಾಜವು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಸಿದರು. ಸರ್ಕಾರ ತಕ್ಷಣ ಈ ಭಾಗದ ಜನರ ಸಮಸ್ಯೆ ಸ್ಪಂದಿಸಿ ಸಚಿವ ಸಂಪೂಟ ಸಭೆ ನಡೆಸಿ ಹೈ-ಕ  371(ಜೆ) ಕಲಂ ಅನುಗುಣ ಪೂರಕವಾದ ನಿರ್ಣಯದೊಂದಿಗೆ ಅಭಿವೃದ್ದಿಗಾಗಿ ಸಂಪುಟ ಸಭೆಯಲ್ಲಿ ಬಡ ಕೃಷಿ ಕೂಲಿ ಕಾರ್ಮಿಕರ,ಹಿಂದುಳಿದ ಜನಾಂಗದ ಅನುಕೂಲಕ್ಕೆ ಸ್ಪಂದಿಸುವ ನಿಟ್ಟಿನತ್ತ ಗಂಭೀರ ಆಲೋಚನೆ ಮಾಡಬೇಕೆಂದು ಆಗ್ರಹಿಸಿದರು. ಮಳೆ ಬಾರದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ವಲಸೆ ಹೋಗುವುದು ಸಾಮಾನ್ಯವಾಗಿದೆ ಆದರಿಂದ ಸರ್ಕಾರ ಬರಗಾಲವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವಿನ ಬ್ಯಾಂಕ್ ಸ್ಥಾಪಿಸಬೇಕು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯೆದ್ಯರು ಕೊರತೆ ಹಾಗೂ ಸಿಬ್ಬಂದಿ ಕೊರತೆ, ನೀರುದ್ಯೋಗಿ ಸಮಸ್ಯೆ ಹೆಚ್ಚಿದ್ದು ಉದ್ಯೋಗ ಕಲ್ಪಿಸಬೇಕು. ರೈತರು ಬೆಳೆದ ಕಬ್ಬಿನ ಬಾಕಿ ಹಣವನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸಬೇಕು. ಶಿಕ್ಷಕರ ಕೊರತೆ ಬಹಳಷ್ಟಿದೆ ಕೊರತೆ ನೀಗಿಸುವ ನೀರ್ಣಯವಾಗಬೇಕು. ಜಿಲ್ಲಾ ಇಲಾಖಾವಾರು ಸಿಬ್ಬಂದಿ ಕೊರತೆಯಿದ್ದು ಸಿಬ್ಬಂದಿ, ಅಧಿಕಾರಿಗಳನ್ನು ನೇಮಿಸಿ ಜಿಲ್ಲೆಯ ಕೆಲವು ರಸ್ತೆಯನ್ನು ಮೆಲ್ದರ್ಜೆಗೆ ಏರಿಸಿ ಸಾರಿಗೆ ಸಂಪರ್ಕ ಅಭಿವೃದ್ದಿ ಪಡಿಸಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ದೇವರಾಜಗೌಡ, ಬಸ್ಸಪ್ಪ, ಲೋಹಿತ ನಾಟೇಕಾರ, ಕಾಶಪ್ಪ, ರಾಜಶೇಖರ ಎನ್, ಗುಂಜಲಪ್ಪ, ಮಹಾದೇವಪ್ಪ, ಮಹಿಳೆಯರು ಮತ್ತು ರೈತರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com