ಜನಸಂಖ್ಯಾಧಾರ ಗ್ರಾಪಂಗಳ ಪುನಾರಚನೆ

Updated on: 

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.3
2011ನೇ ಸಾಲಿನ ಜನಸಂಖ್ಯೆ ಆಧಾರದ ಮೇಲೆ ಗ್ರಾಮ ಪಂಚಾಯಿತಿಗಳ ಮರು ರಚಿಸಲು ಸೂಕ್ತ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ಗ್ರಾಪಂ ಮರು ವಿಂಗಡಣೆ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಮರು ವಿಂಗಡಣೆ ಸಮಿತಿಯ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜನಪ್ರತಿನಿಧಿಗಳಿಂದ ಸಾರ್ವಜನಿಕರಿಂದ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿ ಈಗಾಗಲೇ ಸ್ವೀಕೃತಗೊಂಡಿರುವ ಪ್ರಸ್ತಾವನೆಗಳನ್ನು ಸಮಿತಿ ಪರಿಶೀಲಿಸುತ್ತದೆ.
  ಇದಲ್ಲದೆ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ, ಗ್ರಾಮ ಪಂಚಾಯಿತಿಗಳಿಂದ ಮತ್ತು ಸಾರ್ವಜನಿಕರಿಂದ ಪ್ರಸ್ತಾವನೆ ಸ್ವೀಕರಿಸಲು ಸಮಿತಿ ತೀರ್ಮಾನಿಸಿದ್ದು, ಈಗಾಗಲೇ ರಾಜ್ಯದ 25 ಜಿಲ್ಲೆಗಳಲ್ಲಿ ಪ್ರವಾಸ ಮುಗಿದಿದೆ. ಇಂದು ಯಾದಗಿರಿ ಹಾಗೂ ಗುಲ್ಬರ್ಗದಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
  ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993ರ ಪ್ರಕರಣ 4ರ ಅಡಿಯಲ್ಲಿ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಪ್ರತಿ 5,000 ರಿಂದ 7,000 ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿ ರಚಿಸಲು ಅವಕಾಶವಿರುತ್ತದೆ.
  ಮೇಲ್ಕಂಡ ಜಿಲ್ಲೆಗಳಲ್ಲಿ ಮಾತ್ರ ಪ್ರತಿ 2,500ಕ್ಕೂ ಮೇಲ್ಪಟ್ಟ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿ ರಚಿಸಲು ಅವಕಾಶವಿರುತ್ತದೆ. ವಿಶೇಷ ಸಂದರ್ಭದಲ್ಲಿ 5 ಕಿ.ಮೀ. ತ್ರಿಜ್ಯದ ಅಥವಾ 10 ಕಿ.ಮೀ. ವ್ಯಾಸದ ಅಡಿಯಲ್ಲಿ 2,500 ಜನ ಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿದ ಪ್ರದೇಶವನ್ನು ಕೂಡಾ ಗ್ರಾಮ ಪಂಚಾಯಿತಿ ಎಂದು ಘೋಷಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಒಟ್ಟು ಜಿಲ್ಲೆಯಲ್ಲಿ 117 ಗ್ರಾಪಂಗಳಿದ್ದು, 2,035 ಗ್ರಾಮ ಪಂಚಾಯತಿ ಸದಸ್ಯರಿದ್ದು, 534 ಹಳ್ಳಿಗಳಿವೆ. ಶಹಾಪುರದಲ್ಲಿ 159, ಸುರಪುರದಲ್ಲಿ 201 ಹಾಗೂ ಯಾದಗಿರಿಯಲ್ಲಿ 164 ಹಳ್ಳಿಗಳಿವೆ ಎಂದು ಕಾರ್ಯದರ್ಶಿ ಪಿ.ಶಿವಶಂಕರ್ ತಿಳಿಸಿದರು.
ಸೆಪ್ಟಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಅರ್ಜಿ ಸ್ವೀಕರಿಸಲಿದ್ದು, ಅವುಗಳನ್ನು ಜುಲೈ 8 ರವರೆಗೂ ಮುಗಿಸಿದ ನಂತರ ಕೂಲಂಕಷವಾಗಿ ಚರ್ಚಿಸಿ ಮತ್ತು ಮೂಲ ದಾಖಲಾತಿಗಳೊಂದಿಗೆ ತಜ್ಞರ ಮೂಲಕ ಒಂದು ವರದಿ ತಯಾರಿಸಿ ಸರ್ಕಾರಕ್ಕೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
  ರಾಜ್ಯದ ಕೆಲ ಗ್ರಾಮಗಳಲ್ಲಿನ ಜನತೆಗೆ ತಮ್ಮ ಪಂಚಾಯತ್ ಕೇಂದ್ರ ಸ್ಥಾನ ಸುಮಾರು 25 ರಿಂದ 30 ಕಿ.ಮೀ. ದೂರದಲ್ಲಿವೆ. ಹೀಗಾಗಿ ಜನತೆ ಪಂಚಾಯತ್ ಕಚೇರಿಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮಿತಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ ಎಂದು ಹೇಳಿದರು.
 ಜಿಪಂ ಅಧ್ಯಕ್ಷ ಸಿದ್ದಣ್ಣಗೌಡ ಪಾಟೀಲ, ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಸಮಿತಿ ಸದಸ್ಯರಾದ ಬಿ.ಸಿ. ಶಿವಾನಂದ, ಎಸ್.ಬಿ. ದ್ಯಾಬೇರಿ, ಎಸ್.ಕೆ. ಭಾಗವತ್, ಸುಧಾಮಣಿ, ರಾವ್ ಸಾಹೇಬ ಅಲಗುಂದ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com