ಯಾದಗಿರಿ: ಆಸ್ಪತ್ರೆಗಳಲ್ಲಿ ಮತ್ತು ಮನೆಗಳಲ್ಲಿ ಆಗುವ ಮಕ್ಕಳ ಜನನ ಕುರಿತ ಅಧಿಕೃತ ವರದಿಯನ್ನು ಪಡೆದು ಸಲ್ಲಿಸುವ ಜೊತೆಗೆ ಜನನ-ಮರಣಗಳ ಕುರಿತು ಕಡ್ಡಾಯವಾಗಿ ನೋಂದಣಿ ಆಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮನೋಜ್ ಕುಮಾರ್ ಜೈನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನನ-ಮರಣ ನೋಂದಣಿ ಕುರಿತ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಆಗುವ ಜನನಗಳ ಬಗ್ಗೆ ಅಧಿಕೃತ ವರದಿ ಲಭ್ಯವಿರುವುದು ಅತ್ಯವಶ್ಯ. ಆಸ್ಪತ್ರೆಗಳಲ್ಲಿ ಆಗುವ ಜನನಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಆರೋಗ್ಯ ಅಧಿಕಾರಿಗಳು ಪಡೆಯಬೇಕು ಎಂದರು.
ವಿವಿಧ ಗ್ರಾಮಗಳಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು ರೆಜಿಸ್ಟರ್ ಸಂಖ್ಯೆ 32ನ್ನು ಕಡ್ಡಾಯ ನಿರ್ವಹಣೆ ಮಾಡಿ ಮನೆಗಳಲ್ಲಿ ಆಗುವ ಜನನಗಳ ಬಗ್ಗೆ ಅರ್ಜಿಯನ್ನು ಸಂಬಂಧಪಟ್ಟವರಿಂದ ತಪ್ಪದೇ ಪಡೆದು ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ನಕಲಿ ಜನನಗಳ ದಾಖಲೆ ಮೇಲೆ ನಿಗಾ ಇಡಲು ಸಹಕಾರಿಯಾಗುತ್ತದೆ. ಅದರಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ಗಳಂತಹ ಮೊಕದ್ದಮೆ ದಾಖಲಿಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಂದ ಈ ಕುರಿತು ಅಧಿಕೃತ ಮಾಹಿತಿ ಪಡೆದು ವರದಿ ಸಲ್ಲಿಸಬೇಕು. ಈ ಮೇಲಿನ ಸಂಬಂಧಪಟ್ಟ ಇಲಾಖೆಗಳಿಂದ ಪ್ರತಿ ತಿಂಗಳು 5ರೊಳಗೆ ತಪ್ಪದೇ ವರದಿ ಸಲ್ಲಿಸಬೇಕು. ಅಂಕಿ ಸಂಖ್ಯೆ ಅಧಿಕಾರಿಗಳು ಸಹ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವ ಜೊತೆಗೆ ಜನನ-ಮರಣಗಳ ಕುರಿತ ಸಂಪೂರ್ಣ ಮಾಹಿತಿ ಪರಿಶೀಲನೆ ಮಾಡಬೇಕು ಎಂದರು.
ಸಭೆಯಲಿ ಮಾತನಾಡಿದ ಜಿಲ್ಲಾ ಅಂಕಿಸಂಖ್ಯೆ ಅಧಿಕಾರಿ ಶೇಖ್ ಮೇಹಬೂಬ್ ಆಸ್ಪತ್ರೆಯಲ್ಲಿ ಜನನ ನೋಂದಣಿ ಪ್ರಮಾಣವನ್ನು ಶೇ.65ರಷ್ಟು ತಲುಪಿಸುವತ್ತ ಕ್ರಮ ಕೈಗೊಳ್ಳುವುದು ಅವಶ್ಯಕ. ಜಿಲ್ಲೆಯಲ್ಲಿ 2012ರಲ್ಲಿ ಆಸ್ಪತ್ರೆಗಳಲ್ಲಿ ಶೇ.35ರಷ್ಟು ಅಂದರೆ 11077 ಜನನವಾಗಿದೆ. ಅದರಂತೆ ಮನೆಯಲ್ಲಿ ಶೇ.65ರಷ್ಟು ಅಂದರೆ 20523 ಜನನವಾಗಿದೆ. 2013 ರಲ್ಲಿ ಆಸ್ಪತ್ರೆಗಳಲ್ಲಿ ಜನನ ಪ್ರಮಾಣ ಶೇ.58ರಷ್ಟು ಆಗಿದ್ದರೆ ಮನೆಯಲ್ಲಿ ಈ ಪ್ರಮಾಣ ಶೇ.42ಕ್ಕೆ ಇಳಿದಿದೆ. ಅದರಂತೆ 2013 ರಲ್ಲಿ ಜನನಗಳ ನೋಂದಣಿ ಪ್ರಮಾಣವು ಸಹ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅತ್ಯವಶ್ಯಕ. 1969ರ ಕಾಯ್ದೆಯಡಿ ಜನನ, ಮರಣ ಮತ್ತು ನಿರ್ಜೀವ ಜನನದ ನೋಂದಣಿಯನ್ನು ಮಾಡಿಸುವುದು ಕಡ್ಡಾಯವಾಗಿದೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್ ಉಪಸ್ಥಿತರಿದ್ದರು.