ಶಹಾಪುರ: ಕಳೆದ ನಾಲ್ಕಾರು ದಿನಗಳಿಂದ ಹದವಾದ ಮಳೆ ಬರುತ್ತಿದ್ದು ರೈತರ ಮೊಗದಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ. ಸದ್ಯ ಬೀಜ ಬಿತ್ತುವ ಕಾರ್ಯ ನಡೆದಿದ್ದು ಕೃಷಿ ಚಟುವಟಿಕೆ ಗರಿಗೆದರಿದಂತಾಗಿದೆ.
ಜೂನ್ ತಿಂಗಳಲ್ಲಿ ಮೃಗಶಿರಾ ಮಳೆ ಬರುತ್ತದೆ ಎಂಬ ಭಾವನೆ ಹುಸಿಯಾಗಿ ಕೆಲವರು ಒಣ ಭೂಮಿಯಲ್ಲಿ ಬೀಜ ಬಿತ್ತಿ ತೊಂದರೆಗೆ ಸಿಲುಕಿದ್ದರು. ಜಾನುವಾರುಗಳು ನೀರು, ಮೇವಿಲ್ಲದೆ ಪರಿತಪಿಸಿದ್ದವು. ತಿಂಗಳ ಆರಂಭದಲ್ಲಿ ಅಲ್ಲಲಿ ಮಳೆ ಬೀಳುತ್ತಿರುವುದರಿಂದ ರೈತರಿಗೆ ಹೊಸ ಭರವಸೆ ಮೂಡಿಸಿದೆ. ರೈತ ಸಂಪರ್ಕ ಕೇಂದ್ರಗಳಾದ ದೋರನಹಳ್ಳಿ, ಗೋಗಿ, ವಡಿಗೇರಾ, ಹತ್ತಿಗೂಡುರು, ಭೀಗುಡಿ, ಹೈಯಾಳ, ಮತ್ತು ಶಹಾಪುರಕ್ಕೆ ಸಂಬಂಧಸಿದಂತೆ ಮಳೆಯ ವಾತಾವರಣವಿದೆ. ಕೃಷಿ ಇಲಾಖೆಯಲ್ಲಿ ಸಜ್ಜಿ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ಹೆಸರು ಸೇರಿ 131.53 ಕ್ವಿಂಟಲ್ ದಾಸ್ತಾನು ಇದ್ದು ಕೇವಲ 16.8 ಕ್ವಿಂಟಲ್ ಮಾರಾಟವಾಗಿದೆ.
ಬೀಜ ರಸಗೊಬ್ಬರ ಅಂಗಡಿ ಮೇಲೆ ಕಣ್ಗಾವಲು: ತಾಲೂಕಿನೆಲ್ಲೆಡೆ ರೈತರಿಗೆ ಎಂ.ಆರ್.ಪಿ ನಿಗದಿತ ದರದಲ್ಲಿ ಬೀಜ, ರಸಗೊಬ್ಬರದ ಮಾರಾಟವಾಗುವಂತೆ ನೋಡಿಕೊಳ್ಳಲು ಕೃಷಿ ಇಲಾಖೆಯ ಜಾಗೃತದಳದವರ ಕಣ್ಗಾವಲು ಇದ್ದು ಅದಕ್ಕಾಗಿ ನಾಲ್ಕಾರು ಜನ ಪರಿವೀಕ್ಷಕರಿದ್ದರೆ. ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದು ಕೃತಕ ಅಭಾವ ಸೃಷ್ಠಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.