ಗುಲ್ಬರ್ಗ: ಮಹಾನಗರದಲ್ಲಿ ಮತ್ತೆ ಮಹಿಳೆ ಮೇಲೆ ಹಲ್ಲೆ ನಡೆದಿದೆ. ವಾರದ ಹಿಂದಷ್ಟೇ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ ಸರ ಕಸಿದ ಪ್ರಕರಣ ದಾಖಲಾಗಿತ್ತು. ಈ ಬಾರಿ ಆಟೋಚಾಲಕ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ ಬೆಲೆಬಾಳುವ ವಸ್ತುಗಳನ್ನು ಅಪಹರಿಸಿದ್ದಾನೆ.
ಮಹಿಳೆಯನ್ನು ನಗರದ ರೈಲು ನಿಲ್ದಾಣದಿಂದ ತನ್ನ ಆಟೋದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ ಆಕೆಯ ಬಳಿಯಿದ್ದ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ.
ಚಿಂಚೋಳಿ ತಾಲೂಕಿನ ಶಿರಸನಬುಗಡಿ ತಾಂಡಾದ ಜಗದೇವಿ ಕೇಸು ಚವ್ಹಾಣ ಹಲ್ಲೆಗೊಳಗಾದ ಮಹಿಳೆ. ಬುಧವಾರ ಬೆಳಗ್ಗೆ ರೈಲ್ವೆ ನಿಲ್ದಾಣದಲ್ಲಿ ನಗರದ ನೆಹರು ಗಂಜ್ ಪ್ರದೇಶಕ್ಕೆ ಹೋಗಬೇಕೆಂದು ಆಟೋ ಹತ್ತಿದ್ದಾರೆ. ಆದರೆ ಆಟೋ ಚಾಲಕ ಅವರನ್ನು ವಿಶ್ವವಿದ್ಯಾಲಯ ಹಿಂಭಾಗದಲ್ಲಿರುವ ಕುಸನೂರ್ ರಸ್ತೆಯಲ್ಲಿನ ನಿರ್ಜನ ಪ್ರದೇಶದತ್ತ ಕರೆದೊಯ್ದಿದ್ದಾನೆ.
ಮಾರಣಾಂತಿಕ ಹಲ್ಲೆ: ಅಲ್ಲಿ ಮಹಿಳೆ ಮೇಲೆ ರಾಡು, ಕಟ್ಟಿಗೆಯಿಂದ ತೀವ್ರ ಹಲ್ಲೆ ನಡೆಸಿದ್ದು, ಮುಖ ಹಾಗೂ ಬೆನ್ನಿಗೆ ಭಾರಿ ಪೆಟ್ಟು ಬಿದ್ದಿವೆ. ಮಹಿಳೆ ಮೂರ್ಛೆ ಹೋದಾಗ ಆಕೆಯ ಚೀಲದಲ್ಲಿದ್ದ ಹಣ, ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ಸದ್ಯ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆಂದು ಆಸ್ಪತ್ರೆ ಮೂಲಗಳು ಹೇಳಿವೆ. ವಿಶ್ವವಿದ್ಯಾಲಯ ಠಾಣೆ ಹಾಗೂ ಎಂ.ಬಿ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಶೋಧಕಾರ್ಯ ಆರಂಭಿಸಿದ್ದಾರೆ.
ನೆಮ್ಮದಿ ಹರಣ
ಸರಣಿ ಸರಗಳ್ಳತನದಿಂದ ಗುಲ್ಬರ್ಗ ತತ್ತರಿಸಿದಾಗ ಈ ಬಗ್ಗೆ ಪರಿಶೀಲನೆ ನಡೆಸಲು ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಪೊಲೀಸರೊಂದಿಗೆ ಸಭೆ ನಡೆಸಿದ್ದರು. ಬರುವ ದಿನಗಳಲ್ಲಿ ಪೊಲೀಸ್ ಇನ್ನೂ ಜನಪರವಾಗಲಿದೆ. ಟ್ಯಾಂಗೋಗಳು ಬಡಾವಣೆಗಳಲ್ಲಿ ಸಂಚರಿಸಲಿವೆ. ಜನರ ಸುರಕ್ಷತೆ, ಅದರಲ್ಲೂ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ಇದನ್ನರಿತ ನಗರವಾಸಿಗಳು ತುಸು ನಿರುಮ್ಮಳರಾಗುತ್ತಿದ್ದಂತೆಯೇ ಚಿಂಚೋಳಿ ಮೂಲದ ಮಹಿಳೆ ಮೇಲೆ ಭೀಕರ ಹಲ್ಲೆಯಾಗಿದೆ. ಆಕೆ ಒಬ್ಬಂಟಿ ಎಂಬುದನ್ನರಿತು ಆಕೆಯನ್ನು ಸುತ್ತಾಡಿಸಿ ನಗ-ನಾಣ್ಯ ಸಹ ಅಪಹರಿಸಲಾಗಿದೆ. ಹೀಗಾಗಿ ನಗರ ಪೊಲೀಸ್ ಬಂದೋಬಸ್ತ್ ವಿಚಾರದಲ್ಲಿ ಮತ್ತೆ ಜನತೆ ಸಂಶಯ ಪಡುವಂತಾಗಿದೆ.