ಯಾದಗಿರಿ: ಸಾರಿಗೆ ನಿಗಮದ ವಲಯಗಳ ನೌಕರರ ವರ್ಗಾವಣೆಗೆ ಆಗ್ರಹಿಸಿ ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಗಜೇಂದ್ರ ಅಲ್ಲಿಪುರ ನೇತೃತ್ವದಲ್ಲಿ ಅನೇಕ ಸಾರಿಗೆ ನೌಕರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಬಾರಿ ಸಾರಿಗೆ ನೌಕರರ ವರ್ಗಾವಣೆ ಇರುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿರುವುದು ಸರಿಯಲ್ಲ. ಆದ್ದರಿಂದ ವರ್ಗಾವಣೆ ಬಯಸಿರುವಂತಹ ನೌಕರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಉನ್ನತ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆದಿದೆ.
ಆದರೆ ಚಾಲಕ-ನಿರ್ವಾಹಕ, ಮೆಕ್ಯಾನಿಕ್, ಡಿ ಗ್ರೂಪ್ ನೌಕರರಿಗೆ ವರ್ಗಾವಣೆ ಮಾಡುತ್ತಿಲ್ಲ ಎಂದು ಗಜೇಂದ್ರ ಅಲ್ಲಿಪೂರ ಆರೋಪಿಸಿದ್ದಾರೆ.
ಈ ಕೂಡಲೇ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲ ನೌಕರರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲಾ ಸಾರಿಗೆ ಸಂಸ್ಥೆಯ ಅನೇಕ ನೌಕರರು ಮತ್ತು ಕಾರ್ಮಿಕರು ಹಾಜರಿದ್ದರು.