ಗುಲ್ಬರ್ಗ: ಇಲ್ಲಿನ ರಂಗ ಸಂಗಮ ಕಲಾ ವೇದಿಕೆ ಕಲಾ ಪೋಷಕ ಎಸ್.ಬಿ. ಜಂಗಮಶೆಟ್ಟಿ ಸ್ಮರಣಾರ್ಥ ಪ್ರಥಮ ಪುಣ್ಮಸ್ಮರಣೆ ಹಿನ್ನೆಲೆಯಲ್ಲಿ ರಂಗ ಪ್ರಶಸ್ತಿ ಸ್ಥಾಪಿಸಿದ್ದು, ಜು.18ರಂದು ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ರಂಗ ಪ್ರಶಸ್ತಿಯನ್ನು ಚಿತ್ತಾಪುರ ತಾಲೂಕಿನ ಭೀಮನಳ್ಳಿಯ ಹಿರಿಯ ಹಾರ್ಮೋನಿಯಂ ವಾದಕ ಬಸವರಾಜಯ್ಯ ಸ್ವಾಮಿ ಅವರಿಗೆ ನೀಡುತ್ತಿದೆ. ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಪ್ರಶಸ್ತಿ ಪ್ರದಾನ ಮಾಡುವರು. ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಎಲ್.ಬಿ.ಕೆ. ಆಲ್ದಾಳ ಅಧ್ಯಕ್ಷತೆ ವಹಿಸುವರು. ಕೇಂದ್ರೀಯ ವಿವಿ ಕುಲಸಚಿವ ಡಾ. ಬಸವರಾಜ ಡೋಣೂರು ಮತ್ತು ಕೊಪ್ಪಳದ ಹಿರಿಯ ಸಾಹಿತಿ ಶಾಂತಾದೇವಿ ಹಿರೇಮಠ ಮುಖ್ಯ ಅತಿಥಿಗಳಾಗುವರು. ಪ್ರಶಸ್ತಿ ಪುರಸ್ಕೃತರ ಕುರಿತು ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮಾತನಾಡಲಿದ್ದಾರೆ. ಹಿರಿಯ ರಂಗಕರ್ಮಿ ಶಾಂತಾ ಕುಲಕರ್ಣಿ ರಾಯಚೂರು ಮತ್ತು ಸಂಗೀತ ಪ್ರಾಧ್ಯಾಪಕಿ ಲಕ್ಷ್ಮೀ ಶಂಕರ ಜೋಶಿ ರಂಗ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ವೇದಿಕೆ ಪರವಾಗಿ ಸುಜಾತಾ ಜಂಗಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೈರಾಮಡಗಿ ಗವಿಮಹಾಂತ ಶ್ರೀಗಳು ಲಿಂಗೈಕ್ಯ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಭೈರಾಮಡಗಿ ಮಹಾಂತೇಶ್ವರ ವಿರಕ್ತಮಠದ ಪೀಠಾಧಿಪತಿ ಗವಿ ಮಹಾಂತೇಶ್ವರ ಸ್ವಾಮೀಜಿ(63) ಗುರುವಾರ ಬೆಳಗ್ಗೆ ಲಿಂಗೈಕ್ಯರಾದರು. ಶ್ರೀಗಳ ಪಾರ್ಥೀವ ಶರೀರದ ಅಂತ್ಯಕ್ರಿಯೆ ವಿಧಿ ವಿಧಾನಗಳು ಶುಕ್ರವಾರ ಜು.18ರಂದು ಬೆ.11ಕ್ಕೆ ಗ್ರಾಮದ ಮಹಾಂತೇಶ್ವರ ಮಠದ ಆವರಣದಲ್ಲಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಹರ-ಗುರು-ಚರ ಮೂರ್ತಿಗಳ ನೇತೃತ್ವದಲ್ಲಿ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನವರಾದ ಮಹಾಂತ ಸ್ವಾಮಿಗಳು 1982ರಲ್ಲಿ ಭೈರಾಮಡಗಿ ಮಹಾಂತೇಶ್ವರ ವಿರಕ್ತಮಠಕ್ಕೆ ಪೀಠಾಧಿಪತಿಗಳಾಗಿ ಬಂದ ನಂತರ ಅನೇಕ ಸಮಾಜ ಸುಧಾರಣಾ ಕ್ರಮಗಳಿಗೆ ಸ್ಫೂರ್ತಿಯಾಗಿದ್ದರು. ಶ್ರೀಗಳ ಶಿವಾಧೀನಕ್ಕೆ ಭಕ್ತವೃಂದ ಶೋಕಸಾಗರದಲ್ಲಿ ಮುಳುಗಿದೆ. ಗುಲ್ಬರ್ಗದ ಸಮಾಧಾನ ಭಕ್ತ ಮಂಡಳಿ, ಅಫಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕ ಎಂ.ವೈ.ಪಾಟೀಲ, ಜಿಪಂ ಅಧ್ಯಕ್ಷ ನಿತಿನ್ ಗುತ್ತೇದಾರ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.