ಶಹಾಬಾದ್: ನಾಲವಾರ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ 21 ಸದಸ್ಯರು ತಂದ ಅವಿಶ್ವಾಸ ನಿರ್ಣಯಕ್ಕೆ ಜಯವಾಗಿದ್ದು, ಅಧ್ಯಕ್ಷರು ಹಾಗೂ ಅವರ ಬೆಂಬಲಿಗರು ಗೈರು ಹಾಜರಾದರು. ಸೇಡಂ ಉಪ ಅಯುಕ್ತ ಭೀಮಾಶಂಕರ ಯಡ್ಡಳ್ಳಿ ನಾಲವಾರ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ವೀಕ್ಷಕರಾಗಿ ಉಪಸ್ಥಿತರಿದ್ದರು. ಸದಸ್ಯ ಶಿವುರೆಡ್ಡಿಗೌಡ ಅವರ ನೇತೃತ್ವದಲ್ಲಿ ಅಧ್ಯಕ್ಷ ಈರಣ್ಣಗೌಡ ಬಿರಾಳ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮತಕ್ಕೆ ಹಾಕಿದರು. 29 ಸದಸ್ಯ ಬಲದ ಗ್ರಾಪಂನಲ್ಲಿ 21 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದರೆ, ಅಧ್ಯಕ್ಷ ಈರಣ್ಣಗೌಡ ಬಿರಾಳ ಸಹಿತ 8 ಸದಸ್ಯರು ಸಭೆಗೆ ಗೈರಾಗಿರುವುದರಿಂದ ಅಧಿಕಾರಿಗಳು ಅವಿಶ್ವಾನ ನಿರ್ಣಯ ಪರವಾಗಿದೆ ಎಂದು ಘೋಷಿಸಿದರು. ಸೇಡಂ ಉಪ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿ ಪ್ರಭಾಕರ, ಕಂದಾಯ ನಿರೀಕ್ಷಕ ವೆಂಕಟೇಶ ಕುಲಕರ್ಣಿ ಗ್ರಾಮ ಲೇಖಪಾಲಕ ವಾಮನರಾವ ಕುಲಕರ್ಣಿ, ಸಿದ್ರಾಮ ನಾಚವಾರ, ಅಭಿವೃದ್ಧಿ ಅಧಿಕಾರಿ ಕಾವೇರಿ ರಾಠೋಡ್ ಉಪಸ್ಥಿತರಿದ್ದರು.
ಮಕ್ಕಳಿಗಿಲ್ಲ ಬಿಸಿಯೂಟ!
ಅಫಜಲ್ಪುರ: ತಾಲೂಕಿನ ಆನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಬಿಸಿಯೂಟ ನೀಡುತ್ತಿಲ್ಲ ಎಂದು ಶಾಲೆಯ ಮಕ್ಕಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರಿದರು. ಪಂಚಾಯಿತಿ ಅಧ್ಯಕ್ಷ ಶಿವಪುತ್ರಪ್ಪ ಕರೂರ, ಬಿಇಒ ಚಿತ್ರಶೇಖರ ದೇಗಲಮಡಿ, ತಾಪಂ ಇಒ, ಬಿಸಿಯೂಟ ಅಧಿಕಾರಿ ಅಂಬರೀಷ್ ಕಾಂಬಳೆ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯ ಅವ್ಯವಸ್ಥೆ ಬಗೆಹರಿಸಬೇಕೆಂದು ಮನವಿ ಮಾಡಿದರು. ವಿದ್ಯಾರ್ಥಿ ವೇತನವನ್ನು ಮೂರು ವರ್ಷಗಳಿಂದ ನೀಡುತ್ತಿಲ್ಲ. ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳ ಅಕೌಂಟ್ ಬುಕ್ಗಾಗಿ ಪ್ರತಿ ವಿದ್ಯಾರ್ಥಿಯಿಂದ 130 ತೆಗೆದುಕೊಂಡರೂ 70 ವಿದ್ಯಾರ್ಥಿಗಳ ಅಕೌಂಟಗಳನ್ನೇ ತೆಗೆದಿಲ್ಲ. ನಾವು ನೀಡಿರುವ ದಾಖಲೆ ಪತ್ರಗಳನ್ನು ಸಂಬಂಧಪಟ್ಟ ಶಿಕ್ಷಕರಿಗೆ ನೀಡಿದರೂ ಬ್ಯಾಂಕ್ ಖಾತೆ ತೆರೆದಿಲ್ಲ. ಎಸ್ಸಿ- ಎಸ್ಟಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವ ಬ್ಯಾಗ್ ನೀಡುತ್ತೇವೆಂದು ಸುಮಾರು 50 ವಿದ್ಯಾರ್ಥಿಗಳಿಂದ 1,350 ಹಣ ಪಡೆದಿದ್ದಾರೆಂದು ದೂರಿದರು. ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ತಾಪಂ ಅಧ್ಯಕ್ಷ, ಬಿಇಒ ಹಾಗೂ ತಾಪಂ ಇಒ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.