ಹುಣಸಗಿ: ಸಮೀಪದ ಅಗ್ನಿ ಗ್ರಾಮದಲ್ಲಿ ಪುರಾತನ ಜೈನ ಬಸದಿಯಲ್ಲಿನ ಜಿನ ವಿಗ್ರಹ ನಾಪತ್ತೆಯಾಗಿದ್ದು, ಇದನ್ನು ಬಾಗಲಕೋಟೆ ಜಿಲ್ಲೆಗೆ ಸ್ಥಳಾಂತರಗೊಳಿಸಲಾಗಿದೆಯೇ ಅಥವಾ ಇದು ಕಳವಾಗಿದೆಯೇ ಎಂಬ ಅನುಮಾನ ಕಾಡತೊಡಗಿದೆ.
ಕ್ರಿ.ಶ. 1099ರ ಚಿಕ್ಕಮುದನೂರಿನ ಶಾಸನದಲ್ಲಿ ಅಗ್ನಿ ಬಸದಿಯ ಕುರಿತು ಉಲ್ಲೇಖವಿರುವ, 10 ಶತಮಾನಗಳಷ್ಟು ಹಳೆಯದಾದ ಜೈನಮುನಿ ನೇಮಿನಾಥರ ವಿಗ್ರಹ ಶುಕ್ರವಾರದಿಂದ ಕಾಣುತ್ತಿಲ್ಲ. ಹಾಗಾಗಿ ಗುರುವಾರ ರಾತ್ರಿ ಬಾಗಲಕೋಟೆಗೆ ಸ್ಥಳಾಂತರ ಮಾಡಿರಬಹುದೆಂದು ಶಂಕಿಸಲಾಗಿದ್ದು, ಇದಕ್ಕೆ ಗ್ರಾಪಂ ಅನುಮತಿ ನೀಡಿರುವುದೇ ಕಾರಣವಾಗಿದೆ. ಈ ಘಟನೆಯಿಂದ ನೇಮಿನಾಥ ಮತ್ತು ಯಕ್ಷ-ಯಕ್ಷಿಯರ ಅಪರೂಪದ ಮೂರು ವಿಗ್ರಹಗಳನ್ನು ಜಿಲ್ಲೆ ಕಳೆದುಕೊಂಡಂತಾಗಿದೆ.
ವಿರೋಧ ವ್ಯಕ್ತವಾಗಿತ್ತು: ಕಳೆದ ಜನವರಿಯಲ್ಲಿ ಸ್ಥಳಾಂತರಿಸಲು ವಿಗ್ರಹವನ್ನು ಬಸದಿಯಿಂದ ಹೊರತಂದಾಗ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಬಸದಿ ಸುತ್ತಲೂ ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಆದರೆ ನಂತರ ಬಂದೋಬಸ್ತ್ ವಾಪಸ್ ಪಡೆಯಲು ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ ಯಾರೊಬ್ಬರೂ ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ. ಕೆಲವರು 'ನಮಗ್ಯಾಕೆ ಆ ಉಸಾಬರಿ ನಮ್ಮನ್ನು ಏನೂ ಕೇಳಬೇಡಿ ಹೋಗಿ' ಎಂದು ಉತ್ತರಿಸಿದರು. ಇದಕ್ಕೆ ಸಂಬಂಧಿಸಿದಂತೆ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಕರೆ ಸ್ವೀಕರಿಸದೆ ಮೌನಕ್ಕೆ ಶರಣಾಗಿದ್ದಾರೆ. ವಿಷಯ ತಿಳಿದು ಅಗ್ನಿ ಗ್ರಾಮಕ್ಕೆ ಶುಕ್ರವಾರ ಸಬ್ಇನ್ಸ್ಪೆಕ್ಟರ್ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯರಲ್ಲಿ ಬೇಸರ: ತಾಲೂಕು ಆಡಳಿತದ ಪರವಾನಗಿ ಇಲ್ಲದೆ ವಿಗ್ರಹ ನಾಪತ್ತೆಯಾಗಿರುವುದು ಸ್ಥಳೀಯ ಜನರಲ್ಲಿ ಬೇಸರ ಮೂಡಿಸಿದೆ. ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಮಾಜಿ ಸಚಿವರು ಮುತುವರ್ಜಿ ವಹಿಸದೆ ನಿರ್ಲಕ್ಷಿಸಿರುವುದೇ ಘಟನೆಗೆ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಾಚ್ಯ ವಸ್ತು ಇಲಾಖೆಯಿಂದ ಪುರಾತನ ದೇಗುಲಗಳು, ಜೈನ ಬಸದಿಗಳು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಅಪರೂಪದ ಶಿಲಾಶಾಸನಗಳು, ಮಂದಿರಗಳು ಸ್ಮಾರಕಗಳೂ ರಕ್ಷಿಸುವ ಜವಾಬ್ದಾರಿ ಪ್ರಾಚ್ಯವಸ್ತು ಇಲಾಖೆ ನಿರ್ವಹಿಸಬೇಕಿದೆ.
ಡಿ.ಎನ್. ಅಕ್ಕಿ, ಪ್ರಾಚ್ಯವಸ್ತು ಸಂಶೋಧಕ
ಅಗ್ನಿ ಗ್ರಾಮದಲ್ಲಿನ ಜೈನ ಮುನಿಗಳ ಮೂರ್ತಿಗಳು ಕಣ್ಮರೆಯಾಗಿರುವ ನಿಜಕ್ಕೂ ದಿಗ್ಬ್ರಮೆ ಊಂಟು ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ತಿಳಿಸಿದ್ದೇನೆ.
ರಾಜಾ ವೆಂಕಟಪ್ಪ ನಾಯಕ, ಶಾಸಕರು ಸುರಪುರ
ನನಗೆ ಈಗ ವಿಷಯ ತಿಳಿದಿದ್ದು, ಈ ಕುರಿತು ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡು, ಪರಿಶೀಲಿಸಿ ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮನೋಜ್ ಜೈನ್, ಜಿಲ್ಲಾಧಿಕಾರಿ