ಚಿಂಚೋಳಿ: ಗುಲ್ಬರ್ಗ ಮೀಡಿಯಾ ಕ್ಲಬ್ ಆಸರೆಯಲ್ಲಿ ಚಿಂಚೋಳಿಯ ಚನ್ನಮ್ಮ ಬಸಪ್ಪ ಪಾಟೀಲ್ ಕಾಲೇಜಿನಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಬಿಡಿ ವರದಿಗಾರರ ಮಹತ್ವ ಕುರಿತ ಕಾರ್ಯಾಗಾರ ಯಶಸ್ವಿಯಾಯ್ತು. ಇದೇ ಸಮಾರಂಭದಲ್ಲಿ ತಾಲೂಕು ವರದಿಗಾರರಾಗಿ ದಶಕದಿಂದ ಸೇವೆಯಲ್ಲಿರುವ ಹಿರಿಯ ಪತ್ರಕರ್ತರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಎಸ್.ಕೆ. ಮಾವನೂರ, ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ವರದಿಗಾರರೇ ಪತ್ರಿಕೆಯ ಜೀವಾಳ. ಅವರು ತಮಗಿರುವ ಸವಲತ್ತುಗಳಲ್ಲೇ ಹೆಚ್ಚಿನ ಹಾಗೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ 40 ಸಾವಿರ ಬಿಡಿ ಬರಹಗಾರರಿದ್ದು ರಾಜ್ಯದಲ್ಲಿ ಪ್ರಮುಖ ಪತ್ರಿಕೆಗಳಿಗೆ 1,800 ಅರೆಕಾಲಿಕ ಪತ್ರಕರ್ತರಿದ್ದಾರೆ. ಪೂರ್ಣಕಾಲಿಕರಾಗಿ ಕೆಲಸ ನಿರ್ವಹಿಸುತ್ತಿರುವ ರಾಜ್ಯ ಮತ್ತು ಜಿಲ್ಲಾಮಟ್ಟದ ಪತ್ರಕರ್ತರಿಗೆ ಸೌಲಭ್ಯಗಳಿವೆ ಆದರೆ ಪತ್ರಿಕೆಯ ಜೀವಾಳವೇ ಆಗಿರುವ ಗ್ರಾಮೀಣ ಮಟ್ಟದ ಅರೆಕಾಲಿಕ ಪತ್ರಕರ್ತರಿಗೆ ಸೌಲಭ್ಯಗಳು ಸಿಗುತ್ತಿಲ್ಲ, ಸರ್ಕಾರ ತಾಲೂಕು ವರದಿಗಾರರ ಬದುಕಿಗೂ ಆಸರೆ ಕಲ್ಪಿಸಬೇಕು ಎಂದು ಎಸ್. ಕೆ. ಮಾವನೂರ ಆಗ್ರಹಿಸಿದರು.
ಪಟ್ಟಭದ್ರರ ಹಿಡಿತದಲ್ಲಿ ಸಂಘ ಸಂಸ್ಥೆ: ಗುಲ್ಬರ್ಗ ಮೀಡಿಯಾ ಕ್ಲಬ್ ಅಧ್ಯಕ್ಷ ಬಸವರಾಜ ಚಿನಿವಾರ ಮಾತನಾಡಿ, ಕೆಲವು ಸಂಘ ಸಂಸ್ಥೆಗಳು ಕೆಲವರ ಹಿಡಿತದಲ್ಲಿವೆ. ಉತ್ತಮವಾಗಿ, ಮೌಲ್ಯಗಳನ್ನಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವವರಿಗೆ ಅವಕಾಶಗಳು ಸಿಗುತ್ತಿಲ್ಲ. ವೃತ್ತಿಪರ ಸಂಘಟನೆಗಳನ್ನು ಪಟ್ಟಭದ್ರರ ಹಿಡಿತದಿಂದ ಬಿಡಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಅಧಿಕವಾಗಿದೆ. ಅದರ ಪ್ರಯತ್ನವಾಗಿಯೇ ಸಮಾನ ಮನಸ್ಕ ಗೆಳೆಯರೊಂದಿಗೆ ಕೂಡಿಕೊಂಡು ಮೀಡಿಯಾ ಕ್ಲಬ್ ಪ್ರಾರಂಭಿಸಲಾಗಿದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು ಮಾತನಾಡಿ, ಹೈ.ಕ. ಪ್ರದೇಶದ ಗ್ರಾಮೀಣ ಯುವಕರು ಪತ್ರಿಕೋದ್ಯಮದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಮಾಧ್ಯಮದ ಬೆಳವಣಿಗೆ ಅರಿತುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಎಂದಿಗೂ ಕಡೆಗಣಿಸಲಾಗದು. ಅವರೇ ಪತ್ರಿಕೆಯ ಮುಖ್ಯ ಜೀವಾಳ ಎಂದರು.
ವಚನ ಅಕಾಡೆಮಿಯ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.ಸಿ.ಬಿ.ಪಾಟೀಲ್ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಜಿ.ಜಿ. ಗೌಡಪ್ಪಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುದ್ದಿ ವಾಹಿನಿ ವರದಿಗಾರ ಸಿದ್ದು ಸಾತಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ: ಸಮಾರಂಭದಲ್ಲಿ ತಾಲೂಕಿನ ಹಿರಿಯ ಅನುಭವಿ ವರದಿಗಾರ ಶಾಮರಾವ ಚಿಂಚೋಳಿ, ಎಂ.ಪಿ. ರಾಮರಾವ್, ಕಲಿಮೋದ್ದೀನ್, ಕೇಬಲ್ ಆಪರೇಟರ್ ಬನ್ನಪ್ಪ ಕರಣಗಿ, ದಿನಪತ್ರಿಕೆ ವಿತರಕ ವೀರಶೆಟ್ಟಿ ಗುಬ್ಬಿ ಮುಂತಾದವರನ್ನು ಸನ್ಮಾನಿಸಲಾಯಿತು.
ಶ್ರೀಮಂತ ಕಟ್ಟಿಮನಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮುರ ನಿರೂಪಿಸಿದರು. ನಂದಕುಮಾರ ಬಿರಾದಾರ ವಂದಿಸಿದರು. ಪಟ್ಟಣದ ಗಣ್ಯರಾದ ಕೆ.ಎಂ.ಬಾರಿ, ವಿಜಯಕುಮಾರ ಗಂಗನಪಳ್ಳಿ, ಶಿವನಾಗಯ್ಯ ಸ್ವಾಮಿ, ರಾಮಶೆಟ್ಟಿ ಪವಾರ, ಶ್ರೀಧರ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.