ಶಹಾಬಾದ್: ಮಧ್ಯ ಪ್ರಾಚ್ಯದ ಪ್ಯಾಲಿಸ್ತೇನಿಯರ ಮೇಲೆ ಕಳೆದ ಹಲವು ದಿನಗಳಿಂದ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ನಗರದ ಮುಸ್ಲಿಮರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಬುಧವಾರ ಮಧ್ಯಾಹ್ನ 2 ಗಂಟೆಗೆ ಮಜೀದ್ ವೃತ್ತದಲ್ಲಿ ನೂರಾರು ಜನ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ, ಇಸ್ರೇಲ್ ದೇಶ ಪ್ಯಾಲಿಸ್ತೇನಿಯ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸುವುದನ್ನು ವಿರೋಧಿಸಿ ಘೋಷಣೆ ಕೂಗುತ್ತ, ನೆಹರೂ ವೃತ್ತದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿಯ ಪ್ರತಿಕೃತಿ ದಹಿಸಿದರು.
ಇಸ್ರೇಲ್ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರನ್ನು ಅಮಾನವೀಯವಾಗಿ ಕೊಂದಿದ್ದಾರೆ. ಯುಎನ್ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಮಾತನ್ನು ಒಪ್ಪದ ಇಸ್ರೇಲ್ ವಿರುದ್ಧ ಕೂಡಲೇ ಯುಎನ್ ಸಭೆ ಕರೆಯಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ದಾಳಿಯನ್ನು ಉಗ್ರವಾಗಿ ಖಂಡಿಸಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರಿಗೆ ಬರೆದ ಮನವಿಯನ್ನು ಉಪತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಬ್ದುಲ್ ಜಾಕ ಸಾಬ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ರಬ್ಬಾರಿ, ಎಸ್ಡಿಪಿಐ ಪಕ್ಷದ ಅಧ್ಯಕ್ಷ ಅಬ್ದುಲ್ ರಹೀಮಾನ ಖಾನ್ಮ್ದಿನ್, ಜೆಡಿಎಸ್ ಕಾರ್ಯದರ್ಶಿ ಬಶೀರೋದ್ದಿನ್ ಸೇರಿದಂತೆ ನೂರಾರು ಜನ ಮುಸ್ಲಿಮರು ಪಾಲ್ಗೊಂಡಿದ್ದರು.