ಗಾಜರಕೋಟ ಸಮಸ್ಯೆಗಳ ಕಾಟ

Updated on: 

ಗುರುಮಠಕಲ್: ಸರ್ಕಾರ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂಬ ಮಾತು ಗುರುಮಠಕಲ್ ಮತಕ್ಷೇತ್ರದ ಗಾಜರಕೋಟ ಗ್ರಾಮಕ್ಕೆ ಅನ್ವಯಿಸುವುದಿಲ್ಲ.
  ಏಕೆಂದರೆ ಗ್ರಾಮದ ರಸ್ತೆಗಳಲ್ಲಿ ಚರಂಡಿ ನೀರು ಹರಿಯುತ್ತಿದ್ದು, ನೈರ್ಮಲ್ಯದ ಕುರಿತು ಜಾಗೃತಿ ವಹಿಸಿ ಅಗತ್ಯ ಕ್ರಮಕೈಗೊಳ್ಳಬೇಕಿದ್ದ ಗ್ರಾಪಂ ಅಧಿಕಾರಿಗಳು ನಾಪತ್ತೆಯಾಗಿ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
  ಗ್ರಾಮದಲ್ಲಿ ಚಿಕ್ಕ ಚಿಕ್ಕ ಚರಂಡಿಗಳಿದ್ದು, ಅದಕ್ಕೂ ಕಸ ತುಂಬಲಾಗಿದೆ. ಸ್ವಚ್ಛಗೊಳಿಸದೆ ಇರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಂಚರಿಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ನಂತಹ ಅನೇಕ ಸಮಸ್ಯೆಗಳ ತಾಣವಾಗಿದೆ.
  ಸ್ವಲ್ಪ ಗಾಳಿ ಬೀಸಿತೆಂದರೆ ಸಾಕು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಕತ್ತಲಲ್ಲಿ ಜನರು ವಾಸಿಸುವಂತಾಗಿದೆ, ರಾತ್ರಿ ವೇಳೆಯಂತೂ ಲೈಟ್ ಹೋದರೆ ಬರೋದು ಅಪರೂಪವಾಗಿದೆ ಎಂದು ಗ್ರಾಮಸ್ಥರು ಅಳಲು.
ವಾರದಲ್ಲಿ ಮೂರೇ ದಿನ ವಿದ್ಯುತ್: ವಾರದಲ್ಲಿ ಕೇವಲ 3 ದಿನ ಮಾತ್ರ ವಿದ್ಯುತ್ ಸಂಪರ್ಕ ಸರಿಯಾಗಿರುತ್ತದೆ. ಉಳಿದ ನಾಲ್ಕು ದಿನ ವಿದ್ಯುತ್ ಅಪರೂಪವಾಗಿದೆ. ಇದರಿಂದ ಕುಡಿಯುವ ಸರಬರಾಜಿಗೂ ಸಮಸ್ಯೆ ತಂದೊಡ್ಡಿದೆ. ಪ್ರತಿನಿತ್ಯ ದೂರದ ಕೊಳವೆ ಬಾವಿಗೆ ಹೋಗಿ ನೀರು ತರುವ ಕೆಲಸ ಮಾತ್ರ ಗೃಹಿಣಿಯರಿಗೆ ಕಾಯಂ ಆಗಿದೆ.
  ಗ್ರಾಮದಲ್ಲಿ ಸಮರ್ಪಕ ರಸ್ತೆ ನಿರ್ಮಾಣವಾಗಿಲ್ಲ. ಹಿಂದೆ ನಿರ್ಮಿಸಿರುವ ರಸ್ತೆಗಳು ತೆಗ್ಗು ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕಂಡರೂ ತಮಗೇನು ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಾರೆಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
  ಪ್ರಮುಖವಾಗಿ ಮಹಿಳೆಯರಿಗೆ ಶೌಚಾಲಯಗಳು ಇಲ್ಲದಿರುವುದು ಬಯಲನ್ನೇ ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಶೀಘ್ರದಲ್ಲಿ ಗ್ರಾಮದಲ್ಲಿ ಮಹಿಳೆಯರಿಗಾಗಿ ಶೌಚಾಲಯಗಳನ್ನು ನಿರ್ಮಿಸಲು ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ.
  ಗ್ರಾಮದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ಮಿಸದೆ ಇರುವುದರಿಂದಾಗಿ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುವುದೇ ಗ್ರಾಮಸ್ಥರ ಆಶಯ.


ವರ್ಷವಿಡೀ ಈ ರಸ್ತೆಯಲ್ಲಿ ಹೀಗೆ ಚರಂಡಿ ನೀರು ನಿಂತಿರುತ್ತದೆ. ಇದರತ್ತ ಯಾರೂ ಗಮನಹರಿಸಲ್ಲ. ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲರಿವುದು ಕೊಳಚೆ ನೀರು ನಿಲ್ಲಲು ಕಾರಣವಾಗಿದೆ. ಇದರಿಂದಾಗಿ ರೋಗ ರುಜಿನಗಳು ಹರಡುವ ಭೀತಿಯಲ್ಲಿ ಜನತೆ ಇದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಲು ಮುಂದಾಗಬೇಕು.
 ಓಂಕಾರಪ್ಪ, ಗ್ರಾಮಸ್ಥರು


ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಂದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಹಣ ಬಂದರೆ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು.
 ಶರಣಯ್ಯ, ಗ್ರಾಪಂ ಸದಸ್ಯ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com