ಚಿಂಚೋಳಿ: ಆಟೋದಲ್ಲಿ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಅನುಚಿತ, ಅಸಭ್ಯ ವರ್ತನೆ ಹಾಗೂ ಚುಡಾಯಿಸುವ ಕುರಿತು ಸಾರ್ವಜನಿಕರಿಂದ ದೂರು ಬಂದರೆ ಆಟೋ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಚಿಂಚೋಳಿ ಆರಕ್ಷಕ ಉಪಾಧೀಕ್ಷಕ ರವಿಕುಮಾರ ಪಾಟೀಲ್ ಎಚ್ಚರಿಕೆ ನೀಡಿದರು. ಪಟ್ಟಣದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿ, ಅಟೋ ಚಾಲಕರು ಅಜಾಗರೂಕತೆ ಮತ್ತು ಅಚಾತುರ್ಯದಿಂದ ಚಾಲನೆ ಮಾಡಬೇಡಿ. ಚಾಲನೆ ಪರವಾನಗಿ ವಿಮೆ ಮತ್ತು ಆರ್.ಸಿ. ಮುಂತಾದ ದಾಖಲೆಗಳನ್ನು ಹೊಂದಿರಬೇಕು. ಮದ್ಯಸೇವಿಸಿ ಆಟೋ ಚಾಲನೆ, ಚಾಲನೆ ವೇಳೆ ಮೊಬೈಲ್ನಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ಪೊಲೀಸರು ಆಟೋ ಚಾಲಕರ ಮೇಲೆ ತೋರಿಸುವ ಅನುಕಂಪ ಕಳೆದುಕೊಳ್ಳಬೇಡಿ ಎಂದು ಡಿವೈಎಸ್ಪಿ ರವಿಕುಮಾರ ಪಾಟೀಲ್ ವಿವರಿಸಿದರು. ಚಿಂಚೋಳಿ ಪಿಎಸೈ ರಾಘವೇಂದ್ರ ಜಿ.ಎಸ್. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚುತ್ತಿವೆ. ಇಂತಹ ಪ್ರಕರಣಗಳು ಕಂಡುಬಂದರೆ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು. ಪಿಎಸೈ ರಾಘವೇಂದ್ರ, ಗೋಪಾಲರಾವ ಕಟ್ಟಿಮನಿ, ಧೂಳಪ್ಪ ಬೀರನಳ್ಳಿ ಭಾಗವಹಿಸಿದ್ದರು.