ಆಳಂದ: ತಾಲೂಕಿನ ಗೋರ್ಚಾ ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ಥಳಿ ಸ್ಥಾಪನೆ ಕೈಗೊಳ್ಳುವ ಉದ್ದೇಶದಿಂದ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಿಧಿ ಸಂಗ್ರಹ ಕಾರ್ಯಕ್ಕೆ ತಾಲೂಕಾಧ್ಯಕ್ಷ ರಮೇಶ ಲೋಹಾರ್ ಅವರು ಜು.26ರಂದು ಬೆ.10ಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯಕುಮಾರ ಕೋರೆ, ಪಕ್ಷದ ಆದೇಶದ ಮೇರೆಗೆ ಜು.26ರಿಂದ ಬೂತ್ ಮಟ್ಟದ ಕನಿಷ್ಠ ಐವರು ಯುವಕರಿಂದ ತಲಾ 10 ನಿಧಿ ಸಂಗ್ರಹ ನಡೆಯಲಿದೆ. ಜಿಪಂ ಸದಸ್ಯ ಪೂಜಾ ರಮೇಶ ಲೋಹಾರ ಮತ್ತಿತರು ಗಣ್ಯರು ಪಾಲ್ಗೊಳ್ಳುವರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ತಿಳಿಸಿದ್ದಾರೆ.
ಪತ್ರಿಕಾ ದಿನಾಚರಣೆ ನಾಳೆ
ಶಹಾಬಾದ್: ಸ್ಥಳೀಯ ನೃಪತುಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶರಣಬಸವೇಶ್ವರ ಜ್ಞಾನವಿಕಾಸ ಪೀಠ ಸಂಸ್ಥೆಯ ಸಹಕಾರದೊಂದಿಗೆ ಜು.27ರಂದು ಬೆ.10ಕ್ಕೆ ರೇವಣಸಿದ್ದಪ್ಪ ಗುರುಬಸ್ಸಪ್ಪ ಗೋಳೇದ ಮಹಿಳಾ ಪದವಿ ಕಾಲೇಜಿನ ಸಭಾಗೃಹದಲ್ಲಿ ಪತ್ರಿಕಾ ದಿನ ಹಮ್ಮಿಕೊಂಡಿದೆ. ಶಹಾಬಾದ್ ವಲಯ ಡಿವೈಎಸ್ಪಿ ಮಹೇಶ ಮೇಘಣ್ಣನವರ್ ಕಾರ್ಯಕ್ರಮ ಉದ್ಘಾಟಿಸುವರು. ಚಿತ್ತಾಪುರ ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣಗೌಡ ಪರಸರೆಡ್ಡಿ, ಸಿಪಿಐ ವಿಜಯಕುಮಾರ ಹೊಸಮನಿ, ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಮುಟ್ಟತ್ತಿ ಉಪಸ್ಥಿತರಿರುವರು. ಹಣಮಂತರಾವ ಇಂಗಿನಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ವೇದಿಕೆಯ ಸಂಚಾಲಕ ವಾಸುದೇವ ಚವ್ಹಾಣ್ ತಿಳಿಸಿದ್ದಾರೆ.
ಉಚಿತ ತರಬೇತಿ ನಾಳೆ
ಗುಲ್ಬರ್ಗ: ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಹೈ-ಕ ಏಕೈಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ, ಗುಲ್ಬರ್ಗ ಸಂಸ್ಥೆ ವತಿಯಿಂದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿಯಿರುವ ಸುಮಾರು 52,000 ಬ್ಯಾಂಕ್ ಕ್ಲರಿಕಲ್ ಮತ್ತು ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಜು.27ರಂದು ಬೆ.10ಕ್ಕೆ ಉಚಿತ ತರಬೇತಿ ನಡೆಯಲಿದೆ. ಎಸ್ಬಿಐ ಪ್ರೊಬೇಷನರಿ ಅಧಿಕಾರಿ ದೆಹಲಿಯ ನೀಲೇಶ ಹಾಗೂ ಬೆಂಗಳೂರಿನ ಬ್ಯಾಂಕಿಂಗ್ ವಿಷಯ ತಜ್ಞ ದೇವರಾಜ ಅವರಿಂದ ಕಾರ್ಯಾಗಾರ ನಡೆಯಲಿದೆ. ಇದರ ಸದುಪಯೋಗವನ್ನು ಹೈ.ಕ.ದ ಎಲ್ಲ ಬ್ಯಾಂಕಿಂಗ್ ಪರೀಕ್ಷಾರ್ಥಿಗಳು ಪಡೆಯಬೇಕೆಂದು ಸಂಸ್ಥೆಯ ನಿರ್ದೇಶಕರು ಕೋರಿದ್ದಾರೆ. ಆಸಕ್ತ ಪರೀಕ್ಷಾರ್ಥಿಗಳು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಮಾರ್ಗದರ್ಶಿ ತರಬೇತಿ ಕೇಂದ್ರ, ಸೂಪರ್ ಮಾರ್ಕೆಟ್ ಮುಖ್ಯರಸ್ತೆ, ವಾದಿರಾಜ ಭವನದ ಹಿಂದುಗಡೆ, ರೇಣುಕಾಚಾರ್ಯ ಕಲ್ಯಾಣ ಮಂಟಪ, ನೆಲಮಹಡಿ, ಗುಲ್ಬರ್ಗ. ಹೆಚ್ಚಿನ ಮಾಹಿತಿಗೆ ಮೊ. 9916599569 ಗೆ ಸಂಪರ್ಕಿಸಿ.
ಮತ್ತೆ ಸರಗಳ್ಳರ ಹಾವಳಿ
ಗುಲ್ಬರ್ಗ: ಕಳೆದೊಂದು ವಾರದಿಂದ ಸರಗಳ್ಳತನಗಳಿಂದ ಮುಕ್ತವಾಗಿದ್ದ ಮಹಾನಗರದಲ್ಲಿ ಶುಕ್ರವಾರ ಸರಗಳ್ಳತನ ಪ್ರಕರಣ ಮರುಕಳಿಸಿದೆ. ಈ ಬಾರಿ ಸರಗಳ್ಳರು ಅಶೋಕ ನಗರ ಠಾಣೆ ವ್ಯಾಪ್ತಿಯ ವರ್ಧನ ನಗರದಲ್ಲಿ ದಾಳಿ ಮಾಡಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯಸರ ದೋಚಿದ್ದಾರೆ. ಭಜನೆಗೆ ಹೋಗುತ್ತಿದ್ದ ಸುಭದ್ರಾಬಾಯಿ ಹೆಜೀಬ್ ಎಂಬುವವರ ಕೊರಳಲ್ಲಿದ್ದ 40 ಗ್ರಾಂ. 1.20 ಲಕ್ಷ ಮೌಲ್ಯದ ಸರ ಖದೀಮರ ಪಾಲಾಗಿದೆ. ಭಜನೆಗೆ ಹೋಗುವಾಗ ದಾರಿಯಲ್ಲೇ ಕಳ್ಳರು ಬೈಕ್ ಸವಾರರಾಗಿ ಸಂಜೆ 4.30ರ ಸುಮಾರಿಗೆ ಬಂದು ಈ ದುಷ್ಕೃತ್ಯ ಎಸಗಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಸುಭದ್ರಾಬಾಯಿ ದೂರು ನೀಡಿದ್ದಾರೆ. ಸರಗಳ್ಳತನದಿಂದಾಗಿ ವರ್ಧನ ನಗರ ಸೇರಿದಂತೆ ಆ ಭಾಗದ ಬಡಾವಣೆಗಳ ಮಹಿಳೆಯರು ಆತಂಕಗೊಂಡಿದ್ದಾರೆ.