ಯಾದಗಿರಿ: ಲೋಕ ಕಲ್ಯಾಣಕ್ಕಾಗಿ ಅಬ್ಬೆ ತುಮಕೂರಿನ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪರಂಪರಾ ಪಾದಯಾತ್ರೆ ಶುಕ್ರವಾರ ಸಂಜೆ ಹೆಡಗಿಮದ್ರಾ ಗ್ರಾಮ ತಲುಪಿತು. ಗ್ರಾಮಸ್ಥರು ಮಂಗಲ ವಾದ್ಯಗಳೊಂದಿಗೆ ಪಾದಯಾತ್ರೆಯನ್ನು ಬರಮಾಡಿಕೊಂಡಿದರು. ಗ್ರಾಮಸ್ಥರಾದ ರಾಮರೆಡ್ಡಿ ಸಾಹುಕಾರ ಅವರ ಮನೆಯಲ್ಲಿ ಪಾದಪೂಜೆ ನೆರವೇರಿತು. ಇದಕ್ಕೂ ಮುನ್ನ ಸಿರವಾರ ಸೀಮಾಂತರದ ಭೀಮಾನದಿ ದಾಟಿ ಸನ್ನತಿ ಚಂದ್ರಲಾಂಬಾ ದೇವಸ್ಥಾನದಲ್ಲಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು. ನಂತರ ಸೋಮೇಶ್ವರ ದೇವರ ದರ್ಶನ ಪಡೆದ ಮೇಲೆ ಪಾದಯಾತ್ರೆಯ ಎಲ್ಲ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಮಧ್ಯಾಹ್ನದ ಸಮಯದಲ್ಲಿ ಕನಗನಹಳ್ಳಿಯ ಮೂಲಕ ಉಳವಂಡಗೇರಾ ಗ್ರಾಮಕ್ಕೆ ತಲುಪಿತು. ಆ ಗ್ರಾಮದ ಶ್ರೀ ವಿಶ್ವರಾಧ್ಯ ವಿಶ್ರಾಂತ ಕಟ್ಟೆಯಲ್ಲಿ ಬಂಜಾರ ಸಂಘ ಹಾಗೂ ಉಳವಂಡಗೇರಾ ಗ್ರಾಮಸ್ಥರಿಂದ ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು. ಗ್ರಾಮದ ಬಸವಣ್ಣ ಮಂದಿರದಲ್ಲಿ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು. ಬಾಪುಗೌಡ ಬಿರಾಳ ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಪಾದಯಾತ್ರೆ ಹೆಡಗಿಮದ್ರಾ ಗ್ರಾಮಕ್ಕೆ ತೆರಳಿತು.