ಹಾಸನ/ಚನ್ನರಾಯಪಟ್ಟಣ: ರೈತರೊಬ್ಬರ ಜಮೀನಿನಲ್ಲಿಟ್ಟಿದ್ದ ಬೋನಿಗೆ ಭಾನುವಾರ 5 ವರ್ಷದ ಗಂಡು ಚಿರತೆ ಬಿದ್ದಿದೆ.
ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಬಂಡೀಹಳ್ಳಿಯ ಪಟೇಲ್ ದೇವರಾಜ್ ಎಂಬುವರ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಈ ಚಿರತೆ ಬಿದ್ದಿದೆ. ಕೆಲವು ದಿನಗಳ ಹಿಂದೆ ದಂಡಿಗನಹಳ್ಳಿ ಹೋಬಳಿ ಯಲಿಯೂರು ಗ್ರಾಮದ ರೈತ ನಾಗೇಗೌಡರ ಜಮೀನಿನಲ್ಲಿ 2 ವರ್ಷದ ಗಂಡು ಚಿರತೆಬೋನಿಗೆ ಬಿದ್ದಿತ್ತು. ಮತ್ತೆ ರೈತನ ಜಮೀನಿನಲ್ಲಿ ಒಂದು ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು. ಎರಡು ತಿಂಗಳಲ್ಲಿ ನಾಲ್ಕು ಚಿರತೆ ಹಾಗೂ ಎರಡು ಮರಿಚಿರತೆ ಸಿಕ್ಕಂತಾಯಿತು.
2 ವರ್ಷಗಳಿಂದ ಗ್ರಾಮದ ಸುತ್ತಮುತ್ತಲಿನ ಜನರಿಗೆ ತೊಂದರೆ ಕೊಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ. 1 ತಿಂಗಳಿಂದ ಪಟೇಲ್ ದೇವರಾಜ್ ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಬೋನನ್ನು ತಂದು ತನ್ನ ಜಮೀನಿನಲ್ಲಿ ಇರಿಸಿದ್ದರು. ಆದರೆ 1 ತಿಂಗಳಿನಿಂದ ಬೋನಿನೊಳಗೆ ಹೋಗುವಂತಹ ಸಾಹಸ ಚಿರತೆ ಮಾಡಿರಲ್ಲ. ಈ ಚಿರತೆ ಇದೇ ಗ್ರಾಮದಲ್ಲಿ 8ರಿಂದ 10 ನಾಯಿ, ಐದಾರು ಕುರಿಗಳನ್ನು ತಿಂದು ಹಾಕಿತ್ತು. ಶನಿವಾರ ತಾಲೂಕಿನ 2 ಗ್ರಾಮಗಳಲ್ಲಿ 4 ಚಿರತೆ ಬೋನಿಗೆ ಸಿಲುಕಿತ್ತು. ಬಂಡೀಹಳ್ಳಿಯಲ್ಲಿ ಈ ಚಿರತೆ ಭಾನುವಾರ ಸಿಕ್ಕಿ ಹಾಕಿಕೊಂಡಿದೆ. ಬಂಡೀಹಳ್ಳಿಯಲ್ಲಿ ಹಲವಾರು ಚಿರತೆಗಳಿದ್ದು, ಹಿಡಿಯುವಂತೆ ಒತ್ತಾಯಿಸಿದ್ದಾರೆ.