ಚನ್ನರಾಯಪಟ್ಟಣ: ತಾಲೂಕಿನ ರೈತರು ತಮ್ಮ ಜಮೀನನ್ನು ಸರ್ವೆ ಮಾಡಲು ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಇನ್ನೂ ಅಳತೆ ಮಾಡುತ್ತಿಲ್ಲ. ಬೆಂಗಳೂರಿನ ಕಡೆಯವರು ಅರ್ಜಿ ಸಲ್ಲಿಸಿದರೆ ಒಂದು ವಾರದಲ್ಲಿಯೇ ಸರ್ವೆ ಕಾರ್ಯ ನಡೆಯುತ್ತದೆ ಎಂದು ದಲಿತ ಮುಖಂಡ ಷಣ್ಮುಖ ಅವರು ಆರೋಪಿಸಿದರು.
ಇಲ್ಲಿ ನಡೆದ ಪಜಾ, ಪವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಸರ್ವೆ ಇಲಾಖೆಯಲ್ಲಿ ರೈತರ ಕೆಲಸ ಮಾಡುವುದನ್ನು ಮರೆತು ಹೆಚ್ಚು ಹೆಚ್ಚು ಹಣ ನೀಡುವವರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬೆಂಗಳೂರಿನಿಂದ ಬಂದು ತಾಲೂಕಿನಲ್ಲಿ ಜಮೀನು ಖರೀದಿ ಮಾಡುತ್ತಿರುವವರು ಸರ್ವೆಯರ್ಗಳಿಗೆ ಕೈತುಂಬ ಹಣ ನೀಡುತ್ತಾರೆ. ಅವರ ಅರ್ಜಿಯನ್ನು ಪುರಸ್ಕರಿಸಿ ಅವರು ಹೇಳಿದ ಜಮೀನು ಅಳತೆಯಾಗುತ್ತದೆ. ಆದರೆ ತಾವು ಒಂದು ವರ್ಷದ ಹಿಂದೆ ಹಣ ಕಟ್ಟಿದ್ದರೂ ಜಮೀನಿಗೆ ಸರ್ವೆಯಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಮಂಜಸ ಉತ್ತರ ನೀಡುವುದಿಲ್ಲ ಎಂದು ಹೇಳಿದರು.
ಈ ಬಗ್ಗೆ ಶಾಸಕ ಸಿ.ಎಸ್. ಪುಟ್ಟೇಗೌಡ ಉತ್ತರಿಸಿ ತಾಲೂಕಿನ ರೈತರ ಸಮಸ್ಯೆ ಬಗೆಹರಿಸಿ ನಂತರ ಉಳಿದ ಕಾರ್ಯ ಮಾಡಿ ಸರ್ಕಾರಿ ನೌಕರರಿಗೆ ಎಲ್ಲರೂ ಒಂದೇ ಎಂದು ತಿಳಿಯಬೇಕು ಮುಂದಿನ ದಿನಗಳಲ್ಲಿ ಇಂತಹ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ 22.75ರ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ. ಜಾತಿ ಹಾಗೂ ವರ್ಗಗಳಿಗೆ ಈ ಹಣ ಉಪಯೋಗಿಸುತ್ತಿಲ್ಲ ಎಂದು ನೇರಲಕೆರೆಮಂಜಣ್ಣ ಆರೋಪಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಮ್ಮ ವರ್ಗದವರಿಗೆ ಜಾಬ್ಕಾರ್ಡ್ಗಳನ್ನು ನೀಡುವಂತೆ ಕೇಳಿದರೂ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನೀಡುತ್ತಿಲ್ಲ ಎಂದು ನಾಗಣ್ಣ ಅಪಾದಿಸಿದರು. ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ತಿಯನ್ನು ತಾಲೂಕು ಕಚೇರಿಯಿಂದ ಹಣ ನೀಡಿದವರಿಗೆ ಮಂಜೂರು ಮಾಡುತ್ತಿದ್ದಾರೆ. ಆ ಜಮೀನಿನಲ್ಲಿ ಯಾರು ಅನುಭವದಲ್ಲಿದ್ದಾರೆ ಎಂಬುದರ ಬಗ್ಗೆ ಮೊದಲು ಖಾತ್ರಿ ಮಾಡಿಕೊಂಡು ಕ್ರಮ ತೆಗೆದುಕೊಳ್ಳಿ ಎಂದು ಮಂಜುನಾಥ್ ಒತ್ತಾಯಿಸಿದರು.
ಕಣ್ಣೀರಿಟ್ಟ ಶಾಸಕ: ಕಳೆದ ನಾಲ್ಕು ಮುಕ್ಕಾಲು ವರ್ಷ ತಮ್ಮ ಜತೆ ಸಹಕರಿಸಿದ ತಾಲೂಕಿನ ಜನತೆಗೆ ನನ್ನ ಕೃತಜ್ಞತೆಗಳು. ತಮ್ಮ ಅವಧಿ ನಾಳೆಯೋ ನಾಡಿದ್ದೋ ಎಂಬುದು ತಿಳಿಯದಾಗಿದ್ದು, ಮುಂದಿನ ಚುನಾವಣೆಯಲ್ಲಿ ಗೆಲವು ಅಥವಾ ಸೋಃು ಎಲ್ಲ್ಲ ತಮ್ಮ ಮೇಲಿದೆ ಎಂದು ಗಳಗಳನೆ ಕಣ್ಣೀರಿಟ್ಟು ಇದು ತಮ್ಮ ಕಡೆ ಭಾಷಣ ಎಂದು ಮಾತು ಮುಗಿಸಿದರು. ತಾಲೂಕು ದಂಡಾಧಿಕಾರಿ ಸುನಿಲ್ಕುಮಾರ್, ತಾಪಂ ಅಧ್ಯಕ್ಷೆ ಹೇಮಾವತಿ ಹಾಗೂ ತಾಲೂಕು ಸಮಾಜಕಲ್ಯಾಣಾಧಿಕಾರಿ ಹೇಮಲತಾ ಇದ್ದರು.
ಪ್ರವಾದಿ ಮೊಹಮದ್ ಜನ್ಮ ದಿನಾಚರಣೆ
ಹಾಸನ: ಪ್ರವಾದಿ ಮೊಹಮ್ಮದ ಜನ್ಮ ದಿನಾಚರಣೆ ಜ.25 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲರಿಗೂ ಒಳಿತಾಗಲಿ ಎಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಸೈಯದ್ ಅನ್ಸರ್ ಪಕ್ಷದ ಪರವಾಗಿ ಮುಖ್ಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ರಾಜ್ಯ.ದ ಮುಸ್ಲಿಂ ಮುಖಂಡ ಜಮೀರ್ಖಾನ್, ಶಾಸಕ ಎಚ್.ಎಸ್.ಪ್ರಕಾಶ್, ಯುವ ನಾಯಕ ಡಾ.ಅನಿಲ್ಕುಮಾರ್, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಇತರ ಗಣ್ಯರ ಪರವಾಗಿ ಶುಭಾಶಯ ಕೋರಿದ್ದಾರೆ.