ಹಾಸನ: ಸ್ಥಳೀಯ ಸಂಸ್ಥೆ ಚುನಾವಣೆಯೂ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನೋಟವಾಗಲಿದೆ ಎಂದು ಕೆಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ್ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮನಸ್ಸಿನಲ್ಲಿ ಏನಿದೆ ಎಂಬುದು ಈ ಚುನಾವಣೆಯಲ್ಲಿ ತಿಳಿಯಲಿದ್ದು, 1200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಅನೇಕ ಕಡೆಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಾವೇ ನಿರ್ಣಯಕರಾಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಾನಂದಗೌಡರಿಗೆ ತಿರುಗೇಟು: ನಮ್ಮ ಪಕ್ಷದ ಹಡಗು ಮುಳುಗುತ್ತದೋ ಅಥವಾ ತೇಲುತ್ತದೋ ಅದನ್ನು ಜನರು ತೀರ್ಮಾನಿಸಲಿದ್ದಾರೆ. ಆದರೆ ಸದಾನಂದಗೌಡರು ಮಾತ್ರ ಸಮುದ್ರದಲ್ಲಿ ತೇಲುತ್ತಿರಲಿ ಎಂದು ಹೇಳುವ ಮೂಲಕ ಸದಾನಂದಗೌಡರ ಹೇಳಿಕೆಗೆ ಲೇವಡಿ ಮಾಡಿದರು. ಮುಖಂಡರಾದ ಎಚ್.ಎಂ.ವಿಶ್ವನಾಥ್, ಬಿ.ಆರ್.ಗುರುದೇವ್, ಕಟ್ಟಾಯ ಅಶೋಕ್ ಇದ್ದರು.